ಉದಯವಾಹಿನಿ, ಮುಂಬೈ ತಂಡದ ಪರ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಶತಕ ಸಿಡಿಸಿದ ಬಳಿಕ ಇದೀಗ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಇದೀಗ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿದ್ದಾರೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ 87 ರನ್‌ಗಳನ್ನು ಕಲೆ ಹಾಕಿದರೆ, ವಿರಾಟ್ ಕೊಹ್ಲಿ , ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಅವರನ್ನು ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಲಿದ್ದಾರೆ. ಜನವರಿ 11 ರಂದು ಮೊದಲನೇ ಏಕದಿನ ಪಂದ್ಯ ನಡೆಯಲಿದೆ.
ರೋಹಿತ್ ಶರ್ಮಾ ಅವರು ಇತ್ತೀಚೆಗೆ ಮುಂಬೈ ತಂಡದ ಪರ ಎರಡು ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಆಡಿದ್ದರು. 8 ವರ್ಷಗಳ ಬಳಿಕ ಆಡಿದ ಮೊದಲನೇ ಲಿಸ್ಟ್ ಎ ಪಂದ್ಯದಲ್ಲಿ ಸಿಕ್ಕಿಂ ವಿರುದ್ಧದ 155 ರನ್‌ಗಳನ್ನು ಕಲೆ ಹಾಕಿದ್ದರು. ನಂತರ ಮುಂದಿನ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಗೋಲ್ಡನ್ ಡಕ್‌ಔಟ್ ಆಗಿದ್ದರು. ಮುಂಬೈ ತಂಡವನ್ನು ತೊರೆದಿರುವ ರೋಹಿತ್ ಶರ್ಮಾ, ಇದೀಗ ಭಾರತ ತಂಡದ ಕ್ಯಾಂಪ್‌ಗೆ ಸೇರ್ಪಡೆಯಾಗಲಿದ್ದಾರೆ. ಅಂದ ಹಾಗೆ ರೋಹಿತ್ ಜೊತೆಗಾರ ವಿರಾಟ್ ಕೊಹ್ಲಿ ಕೂಡ ದೆಹಲಿ ತಂಡದ ಪರ ಎರಡು ಪಂದ್ಯಗಳನ್ನು ಆಡಿದ್ದರು. ಇದರಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕವನ್ನು ಬಾರಿಸಿದ್ದರು.
ಲಿಸ್ಟ್ ಎ ಕ್ರಿಕೆಟ್‌ನಲ್ಲಿ 14000 ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಎಲೈಟ್ ಲಿಸ್ಟ್‌ಗೆ ಸೇರಲು ರೋಹಿತ್ ಶರ್ಮಾಗೆ ಕೇವಲ 87 ರನ್‌ಗಳ ಅಗತ್ಯವಿದೆ. ಸದ್ಯ ಬಲಗೈ ಬ್ಯಾಟ್ಸ್‌ಮನ್ 352 ಪಂದ್ಯಗಳ 340 ಇನಿಂಗ್ಸ್‌ಗಳಿಂದ 13913 ರನ್‌ಗಳನ್ನು ಕಲೆ ಹಾಕಿದ್ದಾರೆ. 2006ರಲ್ಲಿ ದೇವಧರ್ ಟ್ರೋಫಿ ಟೂರ್ನಿಯಲ್ಲಿ ಪಶ್ಚಿಮ ವಲಯ ತಂಡದ ಪರ ಆಡಿದ್ದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ರೋಹಿತ್ ಶರ್ಮಾ 47 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದ್ದರು. ಇದಾದ ಒಂದು ವರ್ಷದ ಬಳಿಕ ಅವರು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
2007ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪನೆ ಮಾಡಿದ್ದರೂ ಅವರು ತಂಡದಲ್ಲಿ ನಿಯಮಿತವಾಗಿ 2013ರ ತನಕ ಆಡಿರಲಿಲ್ಲ. 2013ರಲ್ಲಿ ಭಾರತ ತಂಡದ ನಾಯಕ ಎಂಎಸ್ ಧೋನಿ, ರೋಹಿತ್ ಶರ್ಮಾಗೆ ಆರಂಭಿಕ ಸ್ಥಾನವನ್ನು ನೀಡಿದ್ದರು. ಅಂದಿನಿಂದ ಅವರು ರಾಷ್ಟ್ರೀಯ ತಂಡದಲ್ಲಿ ನಿಯಮಿತವಾಗಿ ಆಡಿದ್ದಾರೆ. ಹಿಟ್‌ಮ್ಯಾನ್ ಆಡಿದ 279 ಏಕದಿನ ಪಂದ್ಯಗಳಿಂದ 11516 ರನ್‌ಗಳನ್ನು ಬಾರಿಸಿದ್ದಾರೆ. ಒಡಿಐ ಕ್ರಿಕೆಟ್‌ನಲ್ಲಿ ಮೂರು ಬಾರಿ ದ್ವಿಶತಕ ಬಾರಿಸಿದ ದಾಖಲೆ ಕೂಡ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಇವರ ನಾಯಕತ್ವದಲ್ಲಿ ಭಾರತ ತಂಡ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿತ್ತು.
