ಉದಯವಾಹಿನಿ, ಕೊಳ್ಳೇಗಾಲ: ನಾಡ ಬಂದೂಕಿನಿಂದ ಚಿರತೆಯೊಂದನ್ನು ಬೇಟೆಯಾಡಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದ ಶಾಂತರಾಜು, ಅರುಣ್ ಬಂಧಿತರು. ಮತ್ತೊಬ್ಬ ಆರೋಪಿ ನಟರಾಜ್ ತಲೆ ಮರೆಸಿಕೊಂಡಿದ್ದಾರೆ.ಆರೋಪಿಗಳು ಕಾಡಿಗೆ ಅತಿಕ್ರಮ ಪ್ರವೇಶಿಸಿ ಆಗಾಗ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು ಎಂಬ ಸಂಗತಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.ಉಗುರುಗಳಿಗಾಗಿ ಚಿರತೆಯನ್ನು ನಾಲ್ಕು ದಿನಗಳ ಹಿಂದೆ ಬೇಟೆಯಾಡಿದ್ದರು ಎಂದು ತಿಳಿದುಬಂದಿದೆ.
ಕಾರ್ಯಾಚರಣೆ ವಿವರ: ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸರು ನಾಲ್ಕು ತಂಡಗಳನ್ನು ಮಾಡಿಕೊಂಡು ತಾಲ್ಲೂಕಿನ ಮಧುವನಹಳ್ಳಿ, ಚಿಕ್ಕಲ್ಲೂರು, ಕೊತ್ತನೂರು ಮಾರ್ಗಗಳಲ್ಲಿ ಗಸ್ತಿನಲ್ಲಿದ್ದರು.
ಜಾವ 5 ಗಂಟೆ ಸುಮಾರಿಗೆ ದೊಡ್ಡಿಂದುವಾಡಿ ನಾಲೆ ರಸ್ತೆಯಲ್ಲಿ ಕಾಯುತ್ತಿದ್ದ ವೇಳೆ, ಬೈಕ್ ವೊಂದರಲ್ಲಿ ಇಬ್ಬರು ಬರುತ್ತಿದ್ದರು. ಪೊಲೀಸರು ಅವರನ್ನು ತಡೆದು ಪರಿಶೀಲಿಸಿದಾಗ, ಅವರ ಬಳಿಯಲ್ಲಿ ಎರಡು ನಾಡ ಬಂದೂಕುಗಳು ಪತ್ತೆಯಾದವು.
