ಉದಯವಾಹಿನಿ, ಬೆಂಗಳೂರು:  ಕಾಂಗ್ರೆಸ್‍ನಲ್ಲಿ ಕಾರ್ಯಕರ್ತರು, ಮುಖಂಡರು ಜಾತಕ ಪಕ್ಷಿಗಳಂತೆ ಕಾಯುತ್ತಿರುವ ನಿಗಮ ಮಂಡಳಿಗಳ ನೇಮಕಾತಿಗೆ ಮುಹೂರ್ತ ಕೂಡಿಬಂದಂತೆ ಇದ್ದು, ಎಐಸಿಸಿಯ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೆವಾಲ ಇಂದು ಹಿರಿಯ ನಾಯಕರ ಜತೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ.
ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದಿದ್ದರೂ ಕಾರ್ಯಕರ್ತರಿಗೆ ಹಾಗೂ ನಾಯಕರಿಗೆ ಇನ್ನು ಸರ್ಕಾರದಲ್ಲಿ ಸಹಭಾಗಿತ್ವ ದೊರೆತಿಲ್ಲ. ಹೀಗಾಗಿ ಬಹಳಷ್ಟು ಮಂದಿ ಅಸಮಾಧಾನದಿಂದ ಕುದಿಯುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಚಿವರಾಗಿರುವವರು ಮಾತ್ರ ಅಧಿಕಾರದ ಅವಕಾಶಗಳನ್ನು ಅನುಭವಿಸುತ್ತಿದ್ದಾರೆ.ನಿಗಮ ಮಂಡಳಿಗಳ ನೇಮಕಾತಿಯಿಂದ ಆಡಳಿತ ಯಂತ್ರ ಚುರುಕುಗೊಳ್ಳುವುದಷ್ಟೇ ಅಲ್ಲ ಜನಸಾಮಾನ್ಯರಿಗೆ ಹೆಚ್ಚಿನ ಸೇವೆ ಒದಗಿಸಲು ಸಹಾಯವಾಗುತ್ತದೆ. ಪಕ್ಷ ಸಂಘಟನೆಗೂ ಅನುಕೂಲವಾಗಲಿದೆ. ಆದರೆ, ಪ್ರತಿ ಬಾರಿಯೂ ಉದ್ದೇಶ ಪೂರ್ವಕವಾಗಿಯೇ ನಿಗಮ ಮಂಡಳಿಗಳ ನೇಮಕಾತಿಯನ್ನು ವಿಳಂಬ ಮಾಡಲಾಗುತ್ತಿದೆ ಎಂಬ ಆಕ್ಷೇಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ಈ ಹಿಂದೆ ಮೈಸೂರು ಸೋಪ್‍ನ ನಿಗಮದ ಅಧ್ಯಕ್ಷರಾಗಿದ್ದ ಚನ್ನಗಿರಿ ಕ್ಷೇತ್ರದ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಅವರು ಗುತ್ತಿಗೆಯಲ್ಲಿ ಲಂಚ ಸ್ವೀರಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದು, ಬಿಜೆಪಿ ಸರ್ಕಾರಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಹಿನ್ನಡೆಯಾಗಲು ಕಾರಣವಾದರು. ಅಂತಹದ್ದೇ ಘಟನೆಗಳು ಮರುಕಳುಹಿಸಬಹುದು ಎಂಬ ಭಯ ಕಾಂಗ್ರೆಸ್ ನಾಯಕರಲ್ಲೂ ಕಾಡುತ್ತಿದೆ. ಹೀಗಾಗಿ ಅಳೆದು-ತೂಗಿ ನೇಮಕಾತಿಗೆ ಕ್ರಮ ಕೈಗೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!