ಉದಯವಾಹಿನಿ, ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಸ್ಥಾನಕ್ಕೆ ವಿಜಯೇಂದ್ರ ಹಾಗೂ ಆರ್.ಅಶೋಕ್ ನೇಮಕದ ಬಳಿಕ ರಾಜ್ಯದಲ್ಲಿ ಹಿಂದುತ್ವ ಪ್ರತಿಪಾದಿಸುವ ನಾಯಕರಿಗೆ ಹೈಕಮಾಂಡ್ ಅನ್ಯಾಯ ಮಾಡಿತೇ? ಎಂಬ ಪ್ರಶ್ನೆ ಸೃಷ್ಟಿಯಾಗಿದ್ದು, ಅಡ್ಜೆಸ್ಟ್ಮೆಂಟ್ ರಾಜಕಾರಣವನ್ನು ದೆಹಲಿ ವರಿಷ್ಠರೂ ಒಪ್ಪಿ ಬಿಟ್ಟರೇ ಎಂಬ ಸಂಶಯ ಮೊಳಕೆಯೊಡೆದಿದೆ.ಬಿಜೆಪಿ ಹೈಕಮಾಂಡ್ ಅದರಲ್ಲೂ ಪ್ರಧಾನಿ ನರೇಂದ್ರಮೋದಿ ಹೊಂದಾಣಿಕೆ ಹಾಗೂ ಕುಟುಂಬ ರಾಜಕಾರಣವನ್ನು ಸಮಯ ಸಿಕ್ಕಾಗಲೆಲ್ಲ ವಿರೋಧಿಸಿದ್ದಾರೆ. ಆದರೆ ಈ ಎರಡು ನೇಮಕಗಳು ಮಾತ್ರ ಅವರ ವಾದಕ್ಕೆ ವ್ಯತಿರಿಕ್ತವಾಗಿದ್ದು, ಬಿಜೆಪಿ ಹಾಗೂ ಅದರ ಮಾತೃ ಸಂಸ್ಥೆ ಬೆಳೆಸಿದ ಸಿದ್ಧಾಂತ ಬದ್ಧ ರಾಜಕಾರಣಿಗಳನ್ನು ಅಕ್ಷರಶಃ ನೇಪಥ್ಯಕ್ಕೆ ಸರಿಸಿದೆ. ಹಿಂದುತ್ವದ ಕಟ್ಟರ್ ಪ್ರತಿಪಾದಕರು ಈ ಬೆಳವಣಿಗೆಯೊಂದಿಗೆ ಸಂಪೂರ್ಣವಾಗಿ ಮೂಲೆಗುಂಪಾಗುವ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು ಅಸಮಾಧಾನ ಮಡುಗಟ್ಟಿದೆ.
ಪ್ರಖರ ಹಿಂದುತ್ವದ ಭಾಷಣ ಹಾಗೂ ಹೋರಾಟ ಮಾಡುವವರು ಸದ್ಯಕ್ಕೆ ಯುದ್ಧ ಗೆದ್ದುಕೊಡುವ ಶಕ್ತಿ ಹೊಂದಿಲ್ಲಎಂಬ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಹೆಚ್ಚು ಸ್ಥಾನಗಳನ್ನು ತಂದುಕೊಡುವ ಶಕ್ತಿ ಇದೆಯೋ ಅವರಿಗೆ ಆದ್ಯತೆ. ಸಿದ್ಧಾಂತವೆಲ್ಲ ಮಣ್ಣಾಂಗಟ್ಟಿ ಎಂದು ಕೇಸರಿ ಹೈಕಮಾಂಡ್ ಭಾವಿಸಿದೆ.
