ಉದಯವಾಹಿನಿ, ಭಾರತದ ಆಹಾರ ನಿಯಂತ್ರಣಾಧಿಕಾರಿ ಫುಡ್ ಸೇಫ್ಟಿ ಮತ್ತು ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ ಇತ್ತೀಚೆಗೆ ಕ್ಯಾಮೆಲಿಯಾ ಸೈನೆನ್ಸಿಸ್ ಸಸ್ಯದಿಂದ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಭಾರತದಲ್ಲಿ ಕಾನೂನುಬದ್ಧವಾಗಿ “ಚಹಾ” ಎಂದು ಮಾರಾಟ ಮಾಡಬಹುದು ಎಂದು ಸ್ಪಷ್ಟಪಡಿಸಿದೆ. ಗಿಡಮೂಲಿಕೆ ಮತ್ತು ಇತರೆ ಆರೋಗ್ಯ ಸಂಬಂಧಿತ ಚಹಾಗಳ ಹಾವಳಿ ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದು, ಗ್ರಾಹಕರ ದಾರಿತಪ್ಪಿಸುವ ಲೇಬಲ್‌ಗಳನ್ನು ತಡೆಯುವ ಉದ್ದೇಶಕ್ಕಾಗಿ ಎಫ್‌ಎಸ್‌ಎಸ್‌ಎಐ ಈ ಕ್ರಮವನ್ನು ತಂದಿದೆ.
ಆಹಾರ ನಿಯಂತ್ರಕವು, ಹರ್ಬ್ಸ್ ಟೀ, ಹೂವಿನ ಚಹಾ, ರೂಪಿಬೊಸ್ ಮತ್ತು ಇತರೆ ಸಸ್ಯ ಆಧಾರಿತ ಇನ್ಫ್ಯೂಷನ್‌ಗಳನ್ನು ಕೆಲ ಕಂಪನಿಗಳು “ಚಹಾ” ಎಂದು ಲೇಬಲ್ ಮಾಡುತ್ತಿವೆ. “ಕೆಲವು ಆಹಾರ ವ್ಯವಹಾರ ನಿರ್ವಾಹಕರು ಕ್ಯಾಮೆಲಿಯಾ ಸೈನೆನ್ಸಿಸ್ ಸಸ್ಯದಿಂದ ಪಡೆಯದ ಉತ್ಪನ್ನಗಳನ್ನು ‘ಟೀ’ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದ್ದು, ಹೀಗಾಗಿ ಈ ಕ್ರಮ ಅಗತ್ಯವಾಗಿದೆ” ಎಂದು ಪ್ರಾಧಿಕಾರ ತಿಳಿಸಿದೆ. ಆಹಾರ ಸುರಕ್ಷತಾ ಮಾನದಂಡಗಳಲ್ಲಿ ಚಹಾದ ಕುರಿತಂತೆ ಕಾನೂನು ವ್ಯಾಖ್ಯಾನವನ್ನು ಈಗಾಗಲೇ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ನಿಯಂತ್ರಕರು ಹೇಳಿದ್ದಾರೆ. “ಆಹಾರ ಸುರಕ್ಷತೆ ಮತ್ತು ಮಾನದಂಡಗಳ ನಿಯಮಗಳ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಮಾನದಂಡಗಳ ಪ್ರಕಾರ, ಕಪ್ಪು ಚಹಾ, ಹಸಿರು ಚಹಾ, ವೈಟ್ ಟೀ, ಊಲಾಂಗ್ ಟೀ, ಕಂಗ್ರಾ ಟೀ ಇವುಗಳಲ್ಲಿ ಕ್ಯಾಮೆಲಿಯಾ ಸೈನೆನ್ಸಿಸ್ ಇರಬೇಕು ಎಂದು ಸ್ಪಷ್ಟೀಕರಣದಲ್ಲಿ ತಿಳಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳು (ಲೇಬಲಿಂಗ್ ಮತ್ತು ಪ್ರದರ್ಶನ) ನಿಯಮಗಳು, 2020ರ ಅಡಿಯಲ್ಲಿ, “ಪ್ರತಿ ಪ್ಯಾಕೇಜ್‌ನಲ್ಲಿ ಏನಿದೆ ಎಂಬುವುದನ್ನು ಪ್ಯಾಕ್‌ನ ಮುಂಭಾಗದಲ್ಲಿ ಸೂಚಿಸಬೇಕು” ಎಂದು ಹೇಳಿದೆ.
ಈ ನಿಯಮಗಳ ಆಧಾರದ ಮೇಲೆ, ಇತರ ಸಸ್ಯ ಆಧಾರಿತ ಪಾನೀಯಗಳಿಗೆ “ಚಹಾ” ಎಂಬ ಪದವನ್ನು ಬಳಸುವುದು ದಾರಿತಪ್ಪಿಸುವ ಮತ್ತು ಕಾನೂನುಬಾಹಿರವಾಗಿದೆ ಎಂದು ಪ್ರಾಧಿಕಾರ ಹೇಳಿದೆ. ಈ ಸ್ಪಷ್ಟೀಕರಣವು ಎಲ್ಲಾ ತಯಾರಕರು, ಪ್ಯಾಕರ್‌ಗಳು, ಆಮದುದಾರರು, ಮಾರಾಟಗಾರರು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಅನ್ವಯಿಸುತ್ತದೆ. ಅವರು “ಆಹಾರ ಸುರಕ್ಷತೆ ಮತ್ತು ಮಾನದಂಡಗಳ ನಿಯಮಗಳ ನಿಬಂಧನೆಗಳನ್ನು ಪಾಲಿಸಲು ಮತ್ತು ಕ್ಯಾಮೆಲಿಯಾ ಸೈನೆನ್ಸಿಸ್ನಿಂದ ಪಡೆಯದ ಯಾವುದೇ ಉತ್ಪನ್ನಗಳಿಗೆ ‘ಟೀ’ ಎಂಬ ಪದವನ್ನು ಬಳಸದಂತೆ ಎಫ್‌ಎಸ್‌ಎಸ್‌ಎಐ ನಿರ್ದೇಶಿಸಿದೆ.
