ಉದಯವಾಹಿನಿ, ಕೆ.ಆರ್.ಪೇಟೆ : ಅಡುಗೆ ಸಿಬ್ಬಂದಿಗಳು ಅತಿ ಹೆಚ್ಚು ಜಾಗೃತೆ ವಹಿಸಿ ಬಿಸಿಯೂಟ ತಯಾರಿಸಿ ಸಮರ್ಪಕವಾಗಿ ಮಕ್ಕಳಿಗೆ ವಿತರಿಸಬೇಕು ಎಂದು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್ ತಿಳಿಸಿದರು. ಅವರು ಪಟ್ಟಣದ ತಾಲ್ಲೂಕು ಪಂಚಾಯತಿ ಸಾಮಥ್ರ್ಯಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಬಿಸಿಯೂಟ ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು. ತಾಲ್ಲೂಕಿನಾದ್ಯಂತ ಎಲ್ಲಾ ಶಾಲೆಗಳ ಅಡುಗೆ ಸಿಬ್ಬಂದಿಗಳಿಗೆ ಹಂತಹಂತವಾಗಿ ಒಂದು ದಿನದ ತರಬೇತಿ ನೀಡಲಾಗುತ್ತಿದ್ದು ಎಲ್ಲಿಯೂ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಶಾಲೆಗಳಲ್ಲಿ ಮಕ್ಕಳನ್ನು ಸ್ವಚ್ಚವಾದ ಸ್ಥಳದಲ್ಲಿ ಕೂರಿಸಿ ಊಟ ಬಡಿಸಬೇಕು. ಯಾವುದೇ ಕಾರಣಕ್ಕೂ ಶಾಲಾ ಮಕ್ಕಳನ್ನು ಅಡುಗೆ ಕೋಣೆಗೆ ಕರೆದುಕೊಳ್ಳಬಾರದು. ಅವರಿಂದ ಅಡುಗೆ ಕೆಲಸಗಳನ್ನು ಮಾಡಿಸಬಾರದು. ಸಣ್ಣ ಸಣ್ಣ ಪಾತ್ರೆಗಳ ಮೂಲಕ ಅನ್ನ ಮತ್ತು ಸಾಂಬಾರು ವಿತರಿಸಬೇಕು. ಮಕ್ಕಳಿಂದ ನಾವೆಲ್ಲರೂ ವೇತನ ಪಡೆಯುತ್ತಿದ್ದೇವೆ. ಹಾಗಾಗಿ ನೀವು ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಬೇಕು. ಮಕ್ಕಳು ಎರಡನೇ ತಾಯಿಯ ರೂಪದಲ್ಲಿ ನಿಮ್ಮನ್ನು ನೋಡುತ್ತಾರೆ. ಆದ್ದರಿಂದ ನೀವು ರುಚಿಯಾದ, ಶುಚಿಯಾದ, ಆಹಾರವನ್ಮು ತಯಾರಿಸಿ ನೀಡಬೇಕು.ಸ್ಥಳೀಯವಾಗಿ ಸಿಗುವ ಪೌಷ್ಟಿಕಾಂಶ ವುಳ್ಳ ಆಹಾರ ಪದಾರ್ಥಗಳನ್ನು ಬಳಸುವ ಮೂಲಕ ಮಕ್ಕಳಿಗೆ ಗುಣಮಟ್ಟದ ಆಹಾರ ತಯಾರಿಸಬೇಕು. ಮಕ್ಕಳಿಗೆ ಮುಖ್ಯಶಿಕ್ಚಕರಾಗಲಿ, ಅಡುಗೆ ಸಿಬ್ಬಂದಿಯಾಗಲಿ ಬಿಸಿಯೂಟದಲ್ಲಿ ಯಾವುದೇ ಕಾರಣಕ್ಕೂ ಅನ್ಯಾಯ ಮಾಡಬಾರದು. ಅಡುಗೆ ಸಿಬ್ಬಂದಿಗಳು ಅಡುಗೆ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಏಪ್ರಾನ್ ಧರಿಸಿರಬೇಕು. ಅಡುಗೆ ಕೋಣೆ, ಸುತ್ತಲಿನ ಪರಿಸರವನ್ನು ಸ್ವಚ್ಚತೆಯಿಂದ ಇಟ್ಟುಕೊಳ್ಳಬೇಕು.
