ಉದಯವಾಹಿನಿ, ಬೆಂಗಳೂರು: ನಗರ ಹಾಗೂ ಹೊರವಲಯದ 70ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಕಳುಹಿಸಿರುವ ದುಷ್ಕರ್ಮಿ ಬಂಧನಕ್ಕಾಗಿ ಸಿಸಿಬಿ ಸೈಬರ್ ಕ್ರೈಂ ಅಧಿಕಾರಿ ಮತ್ತು ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ.
ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸತೀಶ್‍ಕುಮಾರ್ ಅವರ ನೇತೃತ್ವದಲ್ಲಿ ಸಿಸಿಬಿ ಪೊಲೀಸರ ತಂಡ ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದೆ. ಈ ಹಿಂದೆ ಬಂದಿದ್ದ ಹುಸಿ ಬಾಂಬ್ ಇ-ಮೇಲ್‍ಗಳನ್ನು ಆಧರಿಸಿ ಈ ತಂಡ ತನಿಖೆ ಕೈಗೊಂಡಿದ್ದು, ಪದೇ ಪದೇ ಈ ರೀತಿ ನಡೆಯುತ್ತಿರುವ ಕೃತ್ಯದ ಹಿಂದಿರುವ ದುಷ್ಕರ್ಮಿಗಳಾರು?; ಇದರ ಹಿಂದಿನ ಅಸಲಿ ಕಾರಣವೇನು? ಪ್ರತಿಷ್ಠಿತ ಖಾಸಗಿ ಶಾಲೆಗಳನ್ನೇ ಟಾರ್ಗೆಟ್ ಮಾಡಿ ಇಮೇಲ್ ಕಳುಹಿಸುತ್ತಿರುವ ಇದರ ಉದ್ದೇಶವಾದರೂ ಏನು? ಈ ಕೃತ್ಯಕ್ಕೆ ಇ-ಮೇಲ್ ಬಳಸುತ್ತಿರುವ ದುಷ್ಕರ್ಮಿ ಯಾರೆಂಬ ಬಗ್ಗೆ ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ.
ದುಷ್ಕರ್ಮಿಯು ವರ್ಚುಯಲ್ ಪ್ರೈವೇಟ್ ನೆಟ್‍ವರ್ಕ್ ಬಳಸಿ ಶಾಲೆಗಳಿಗೆ ಇಮೇಲ್ ಸಂದೇಶಗಳನ್ನು ಕಳುಹಿಸಿದ್ದಾನೆ. ಹೀಗಾಗಿ ಪೊಲೀಸರು ದುಷ್ಕರ್ಮಿ ಬಳಸಿರುವ ಕಂಪ್ಯೂಟರ್, ಸೈಬರ್ ಕೆಫೆ ಇಲ್ಲವೇ ಲ್ಯಾಪ್‍ಟಾಪ್ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
