ಉದಯವಾಹಿನಿ, ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯಾದ್ಯಂತ ಮಿಂಚಿನ ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ 63 ಕಡೆ 13 ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಸಂಪತ್ತನ್ನು ಬಯಲಿಗೆಳೆದಿದ್ದಾರೆ.
ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ವಿಶೇಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ .ವೈ.ವಿಜಯೇಂದ್ರ ಅವರ ಪತ್ನಿಯ ಸಹೋದರನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಯಾದಗಿರಿಯಲ್ಲಿ ಡಿಎಚ್‍ಒ ಆಗಿರುವ ಡಾ.ಪ್ರಭುಲಿಂಗ ಮಾನಕರ್ ಅವರ ಕಲಬುರಗಿ ನಗರದ ಕರುಣೇಶ್ವರ ಕಾಲೋನಿಯಲ್ಲಿರುವ ನಿವಾಸ ಸೇರಿದಂತೆ ಹಲವೆಡೆ ಲೋಕಾ ಅಧಿಕಾರಿಗಳು ಶೋಧ ನಡೆಸಿದ್ದು, ಈ ವೇಳೆ 300 ಗ್ರಾಂ ಚಿನ್ನಾಭರಣ ಹಾಗೂ 4 ಲಕ್ಷ ನಗದು ಪತ್ತೆಯಾಗಿದ್ದು, ಇವರ ಸಂಬಂಗಳ ನಿವಾಸಗಳಲ್ಲೂ ಕೂಡ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
