ಉದಯವಾಹಿನಿ, ಬೆಳಗಾವಿ: ಕಲಬುರಗಿ, ಯಾದಗಿರಿ ಹಾಗೂ ಬೀದರ್ ವ್ಯಾಪ್ತಿಯ ಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿಂದು ಬಿಜೆಪಿ ಸದಸ್ಯ ತಳವಾರ್ ಸಾಬಣ್ಣ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪರವಾಗಿ ಉತ್ತರಿಸಿದ ಅವರು, ಬರ ಪೀಡಿತ ಜಿಲ್ಲೆಗಳಾದ ಇಲ್ಲಿ ನೀರೊದಗಿಸುವ ಕಾಲುವೆಗಳು ದುಸ್ಥಿತಿಯಲ್ಲಿವೆ. ಕಾಲುವೆಗಳು ಒಡೆದು, ಗಿಡಗಂಟೆ ಬೆಳೆದು ನಿಂತಿರುವುದರಿಂದ ಸರಿಯಾಗಿ ರೈತರಿಗೆ ನೀರು ಹರಿಸಲು ಸಾಧ್ಯವಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದರು.
ಜಲ ಸಂಪನ್ಮೂಲ ಇಲಾಖೆಯಡಿ ಕಲಬುರಗಿ, ಯಾದಗಿರ ಮತ್ತು ಬೀದರ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಯೋಜಿತ ಸರ್ಕಾರದ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಅಗತ್ಯ ಅನುದಾನ ನೀಡಲಾಗುವುದು ಎಂದು ಸಚಿವರು ಹೇಳಿದರು.
