ಉದಯವಾಹಿನಿ ಬೆಳಗಾವಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕಾಗಿ ಮೀಸಲಿಟ್ಟ ಎಸ್‍ಸಿ-ಎಸ್‍ಪಿ/ಟಿಎಸ್‍ಪಿ ಅನುದಾನವನ್ನು ರಾಜ್ಯ ಸರ್ಕಾರವು ತನ್ನ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಳಸಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಗದ್ದಲ ಎಬ್ಬಿಸಿದ ಪರಿಣಾಮ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮೇಲ್ಮನೆಯಲ್ಲಿ ಮಾತಿನ ಚಕಮಕಿ, ಆರೋಪ, ಪ್ರತ್ಯಾರೋಪ ನಡೆದು ಸದನವನ್ನು ಕೆಲಕಾಲ ಮುಂದೂಡಿದ ಪ್ರಸಂಗ ಜರುಗಿತು.ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರು, ಎಸ್‍ಸಿಎಸ್‍ಪಿ ಟಿಎಸ್‍ಪಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಬಳಕೆ ಮಾಡಿರುವ ಅನುದಾನದ ಕುರಿತು ಪ್ರಶ್ನೆ ಕೇಳಿದ್ದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ನೀಡಿದ ಉತ್ತರಕ್ಕೆ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಸಚಿವ ಎಚ್.ಸಿ.ಮಹದೇವಪ್ಪನವರು ಎಸ್‍ಸಿಎಸ್‍ಪಿ ಟಿಎಸ್‍ಪಿ ಅಧಿನಿಯಮ 2013ರ ಅನ್ವಯ ಸೆಕ್ಷನ್ ಎ, ಬಿ ಸಿ, ಡಿ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ನೇರವಾಗಿ ಪ್ರಯೋಜನವಾಗುವ ವೈಯಕ್ತಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಈ ಅನುದಾನವನ್ನು ಅನ್ಯ ಕಾರ್ಯಕ್ರಮಗಳಿಗೆ ವರ್ಗಾವಣೆ ಮಾಡಲು ಬರುವುದಿಲ್ಲ ಎಂದು ಸಮರ್ಥಿಸಿಕೊಂಡರು.

Leave a Reply

Your email address will not be published. Required fields are marked *

error: Content is protected !!