ಉದಯವಾಹಿನಿ, ಬೆಂಗಳೂರು: ಜನತಾದಳ ಜಾತ್ಯತೀತ (ಜೆಡಿಎಸ್) ಪಕ್ಷದ ಮಹತ್ವದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ನಾಳೆ ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ನಡೆಯಲಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಆರಂಭವಾಗುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ.ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಆಗಮಿಸುವಂತೆ ಎಲ್ಲಾ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಿಗೆ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಶಿವಕುಮಾರ್ ಅವರು ಆಹ್ವಾನ ನೀಡಿದ್ದಾರೆ.
ಎನ್‍ಡಿಎ ಮೈತ್ರಿಕೂಟ ಸೇರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದ ಬೆನ್ನಲ್ಲೇ ಜೆಡಿಎಸ್‍ನಲ್ಲಿ ಉಂಟಾಗಿರುವ ಆಂತರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾಳೆ ನಡೆಯುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಭಾರೀ ಮಹತ್ವ ಪಡೆದುಕೊಂಡಿದ್ದು, ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದೆ. ಎನ್‍ಡಿಎ ಮೈತ್ರಿಕೂಟ ಸೇರುವುದನ್ನು ವಿರೋಧಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರು, ಪ್ರತ್ಯೇಕ ಸಭೆ ನಡೆಸಿ ನಮ್ಮದೇ ಒರ್ಜಿನಲ್ ಜನತಾದಳವೆಂದು ಘೋಷಿಸಿಕೊಂಡು ಪಕ್ಷದ ನಾಯಕರಿಗೆ ಸಡ್ಡು ಹೊಡೆದಿದ್ದರು. ಜೊತೆಗೆ ರಾಷ್ಟ್ರೀಯ ಉಪಾಧ್ಯಕ್ಷರಾದ ಸಿ.ಕೆ.ನಾನು ನೇತೃತ್ವದಲ್ಲಿ ಕೇರಳದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಸಿದ್ದು, ಎನ್‍ಡಿಎ ಮೈತ್ರಿಕೂಟದಿಂದ ಹೊರಬರಲು ಡಿಸೆಂಬರ್ 10ರ ಗಡುವು ನೀಡಲಾಗಿತ್ತು.
