ಉದಯವಾಹಿನಿ, ಬೆಂಗಳೂರು: ಮೌಲ್ವಿ ತನ್ವೀರ್ ಹಾಶ್ಮಿ ಅವರ ಜೊತೆಗಿನ ನನ್ನ ಫೋಟೊವನ್ನು ಹಿಡ್ಕೊಂಡು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನನ್ನ ವಿರುದ್ದ ಆರೋಪ ಮಾಡಿದರೂ ಅವರ ನಿಜವಾದ ಗುರಿ ಪ್ರಧಾನಿ ನರೇಂದ್ರಮೋದಿ ಎನ್ನುವುದು ನಿಧಾನವಾಗಿ ಬಯಲಾಗತೊಡಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಮೌಲ್ವಿ ಹಾಶ್ಮಿ ಅವರ ಜೊತೆಗೆ ಇತರ ಬಿಜೆಪಿ ನಾಯಕರು ಮಾತ್ರವಲ್ಲ ಸಾಕ್ಷಾತ್ ನರೇಂದ್ರಮೋದಿ ಅವರೂ ಸಂಬಂಧ ಹೊಂದಿರುವುದು ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ಫೋಟೊಗಳು ಸ್ಪಷ್ಟವಾಗಿ ಹೇಳುತ್ತಿವೆ ಎಂದಿದ್ದಾರೆ.
ದೀರ್ಘಕಾಲದಿಂದ ಹಾಶ್ಮಿ ಅವರಿಗೆ ಅತ್ಯಂತ ಆತ್ಮೀಯರಾಗಿರುವ ಮತ್ತು ಊರಿನಲ್ಲಿ ತನ್ನ ನೆರೆಹೊರೆಯಾಗಿರುವ ಯತ್ನಾಳ್ ಅವರಿಗೆ ಇದು ತಿಳಿದಿರಲಿಲ್ಲ ಎನ್ನುವುದನ್ನು ನಂಬಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷತೆ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನ ತಪ್ಪಿ ಹೋಗಿರುವುದರಿಂದ ಯತ್ನಾಳ್ ಅವರು ಕೆರಳಿ ಕೆಂಡವಾಗಿದ್ದಾರೆ. ಇದಕ್ಕೆ ಕಾರಣಕರ್ತರಾದ ಪ್ರಧಾನಿ ನರೇಂದ್ರಮೋದಿ ಮತ್ತು ಅಮಿತ್ ಶಾ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಮೌಲ್ವಿ ತನ್ವೀರ್ ಹಾಶ್ಮಿ ಜೊತೆಗಿನ ನನ್ನ ಫೋಟೋವನ್ನು ತೋರಿಸಿ ಆರೋಪ ಮಾಡಿದ್ದಾರೆ ಎಂದು ದೂರಿದ್ದಾರೆ.
