ಉದಯವಾಹಿನಿ, ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರಗಳ ವಿಧೇಯಕದ ತಿದ್ದುಪಡಿಯ ಬಳಿಕ ರಾಜ್ಯದ ಎಪಿಎಂಸಿಗಳು ಆದಾಯದ ಕೊರತೆ ಅನುಭವಿಸುತ್ತಿದ್ದು, ಅದನ್ನು ಹಿಂದಿನಂತೆ ಸರಿಪಡಿಸಲು ರೂಪಿಸಲಾಗಿರುವ ವಿಧೇಯಕ ಸದನ ಸಮಿತಿಯ ಪರಿಶೀಲನೆಗೆ ಒಳಪಡುತ್ತದೆ ಎಂದು ಕೃಷಿ ಇಲಾಖೆ ಸಚಿವ ಶಿವಾನಂದ ಎಸ್.ಪಾಟೀಲ್ ತಿಳಿಸಿದ್ದಾರೆ.
ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರಗಳ ವಿಧೇಯಕ ತಿದ್ದುಪಡಿಯಿಂದ 145 ಎಪಿಎಂಸಿಗಳು ಅನಾಥವಾಗಿರುವುದು ಸರ್ಕಾರದ ಗಮನದಲ್ಲಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ನಿಯಂತ್ರಣಾ ಅಧಿಕಾರವನ್ನು ಮಾರುಕಟ್ಟೆ ಪ್ರಾಂಗಣಗಳಿಗೆ ಮಿತಿಗೊಳಿಸಿರುವುದರಿಂದ ರಾಜ್ಯದಲ್ಲಿನ ಬಹಳಷ್ಟು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಆದಾಯದ ಕೊರತೆ ಎದುರಿಸುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯಸರ್ಕಾರವು ಮಾರುಕಟ್ಟೆ ಪ್ರಾಂಗಣಗಳ ಹೊರಗಡೆ ನಡೆಯುವ ವಹಿವಾಟಿನ ಮೇಲೆ ಈ ಮೊದಲಿನಂತೆ ನಿಯಂತ್ರಣ ಹೊಂದುವುದು ರೈತ ಬೆಳೆಗಾರರ ಹಿತದೃಷ್ಟಿಯಿಂದ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ವಿಧಾನಮಂಡಲದಲ್ಲಿ ಮಂಡಿಸಲಾಯಿತು. ವಿಧಾನಸಭೆಯಲ್ಲಿ ಜುಲೈ 17 ರಂದು ಕಾಯ್ದೆ ಅಂಗೀಕಾರಗೊಂಡಿದೆ. ಮಾರನೆಯ ದಿನ ವಿಧಾನಪರಿಷತ್‍ನಲ್ಲಿ ಕಾಯ್ದೆಯ ಕುರಿತು ಚರ್ಚೆಯಾಗಿದೆ.
