ಉದಯವಾಹಿನಿ, ಬೆಂಗಳೂರು: ತಡೆರಹಿತ ವಿದ್ಯುತ್ ಸರಬರಾಜು ತಡೆಗಾಗಿ ಕಳೆದ ವರ್ಷ 476.61 ಕೋಟಿ ರೂ.ಗಳನ್ನು ವೆಚ್ಚ ಮಾಡಿ ವಿದ್ಯುತ್ ಖರೀದಿಸಲಾಗಿದ್ದು, ಈ ವರ್ಷ ಅಕ್ಟೋಬರ್ ವೇಳೆಗೆ 1997.29 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ರಾಯಭಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಮಹಾಲಿಂಗಪ್ಪ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, 2022-23ರಲ್ಲಿ 37 ಸಾವಿರ ಮಿಲಿಯನ್ ಯುನಿಟ್ ಮತ್ತು 2023-24 ನೇ ಸಾಲಿನ ಏಪ್ರಿಲ್‍ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ವಿವಿಧ ಮೂಲಗಳಿಂದ 46,847.42 ಮಿಲಿಯನ್ ಯುನಿಟ್ ವಿದ್ಯುತ್ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯಸರ್ಕಾರ ನೇರವಾಗಿ ಇತರ ರಾಜ್ಯಗಳಿಂದಾಗಲಿ ಅಥವಾ ಖಾಸಗಿ ಕಂಪನಿಗಳಿಂದಾಗಲಿ ವಿದ್ಯುತ್ ಖರೀದಿಸುವುದಿಲ್ಲ. ಆದರೆ ವಿವಿಧ ವಿದ್ಯುತ್ ವಿನಿಮಯ ಕೇಂದ್ರಗಳ ಮೂಲಕ ಖರೀದಿಸಲಾಗುತ್ತದೆ. ಅದರ ಪ್ರಕಾರ, ಈ ವರ್ಷ ಐಇಎಕ್ಸ್ ವಿನಿಮಯ ಕೇಂದ್ರದಿಂದ ಪ್ರತಿ ಯುನಿಟ್‍ಗೆ 6.81 ಪೈಸೆಯಂತೆ 1544.52 ಮಿಲಿಯನ್ ಯುನಿಟ್‍ಗಳನ್ನು 1036.12 ಕೋಟಿ ರೂ. ವೆಚ್ಚ ಮಾಡಿ ಖರೀದಿಸಲಾಗಿದೆ.
ಟಿಎಕ್ಸ್‍ಐಎಲ್ ಸಂಸ್ಥೆಯಿಂದ ಯುನಿಟ್‍ಗೆ 7.58 ರೂ.ನಂತೆ 69.20 ಕೋಟಿ ಖರ್ಚು ಮಾಡಿ 91.31 ಮಿಲಿಯನ್ ಯುನಿಟ್, ಎಚ್‍ಪಿಎಕ್ಸ್ ವಿನಿಮಯ ಕೇಂದ್ರದಿಂದ ಪ್ರತಿ ಯುನಿಟ್‍ಗೆ 7.63 ರೂ.ನಂತೆ 91.97 ಕೋಟಿ ವೆಚ್ಚ ಮಾಡಿ 120.50 ಮಿಲಿಯನ್ ಯುನಿಟ್ ಅನ್ನು ಖರೀದಿಸಲಾಗಿದೆ. ಒಟ್ಟು 1756.33 ಮಿಲಿಯನ್ ಯುನಿಟ್‍ಗೆ 1197.29 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಒಟ್ಟಾರೆ ಸರಾಸರಿ ಯುನಿಟ್‍ನ ದರ 6.82 ರೂ.ಗಳು ಎಂದು ತಿಳಿಸಿದ್ದಾರೆ.
