ಉದಯವಾಹಿನಿ,ಬೆಂಗಳೂರು: ರೈತರಿಗೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಫಲವತ್ತತೆ ಪರೀಕ್ಷಿಸಿ ಅದಕ್ಕನುಗುಣವಾಗಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಮನವರಿಕೆ ಮಾಡಿಕೊಡಲು ಪ್ರತಿ 3 ತಿಂಗಳಿಗೊಮ್ಮೆ ತರಬೇತಿ ಶಿಬಿರಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗಣಿ-ಭೂವಿಜ್ಞಾನ ಮತ್ತು ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಸುಲಿದ ತೆಂಗಿನಕಾಯಿ ಮತ್ತು ಒಣಕೊಬ್ಬರಿಗೆ ಪ್ರತಿ ವರ್ಷ ಬೆಂಬಲ ಬೆಲೆ ನಿಗದಿಪಡಿಸಲಾಗುತ್ತಿದೆ. ಉಳಿದ ತೋಟಗಾರಿಕೆ ಬೆಳೆಗಳಿಗೆ ಸಂದರ್ಭಾನುಸಾರ ಬೆಲೆ ನೀಡಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಪರಂಪರಾಗತ. ಕೃಷಿ ವಿಕಾಸ್ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ, ತಾಳೆ ಬೆಳೆ ಹಾಗೂ ರಾಜ್ಯಸರ್ಕಾರದ ಯೋಜನೆಗಳಾದ ಸಮಗ್ರ ತೋಟಗಾರಿಕೆ ಅಭಿವೃದ್ಧಿ, ಜಿಲ್ಲಾವಲಯ ಯೋಜನೆಯಲ್ಲಿ ರೈತರಿಗೆ ತರಬೇತಿ ಹಾಗೂ ಮಾಹಿತಿ ನೀಡಲಾಗುತ್ತಿದೆ. ಕ್ಷೇತ್ರೋತ್ಸವ ವಿಚಾರ ಸಂಕಿರಣ ಹಾಗೂ ಅಧ್ಯಯನ ಪ್ರವಾಸಗಳನ್ನು ಆಯೋಜಿಸಲಾಗುತ್ತಿದೆ.
