ಉದಯವಾಹಿನಿ,  ಹುಳಿಯಾರು:  ರೈತರಿಗೆ ಕೃಷಿ ಜಾಗೃತಿ ಮೂಡಿಸುವಂತೆ ಪತ್ರಕರ್ತ ಹುಳಿಯಾರ್ ಕಿರಣ್ ಮಾಡಿದ್ದ ಮನವಿ ಮೇರೆಗೆ ೨೦೧೨ ರ ಡಿಸೆಂಬರ್ ಮಾಹೆಯಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹುಳಿಯಾರು ಹೋಬಳಿಯ ಫಲಾನುಭವಿ ರೈತರಿಗೆ ಖ್ಯಾತ ಚಲನಚಿತ್ರ ನಟಿ ಲೀಲಾವತಿ ಹಾಗೂ ವಿನೋದ್‌ರಾಜ್ ಅವರು ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಬೆಲೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸಿದ್ದರು.ರೈತರು ಕೃಷಿ ಉತ್ಪನ್ನಗಳನ್ನು ತಮ್ಮ ಹೊಲ, ಗದ್ದೆ, ತೋಟಗಳಲ್ಲಿಯೇ ಮಾರದೆ ಮಾರುಕಟ್ಟೆಗೆ ತಂದು ಮಾರುವ ಬಗ್ಗೆ ನೆಲಮಂಗಲ ಸಮೀಪದ ಸೋಲದೇವನಹಳ್ಳಿಯಲ್ಲಿ ತಾವೇ ಬೆಳೆದ ತೆಂಗಿನಕಾಯಿಗಳನ್ನು ತುಮಕೂರಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದು ಮಾರುವ ಮೂಲಕ ರೈತರಿಗೆ ಜಾಗೃತಿ ಪಾಠ ಮಾಡಿದ್ದರು.ಮಾರುಕಟ್ಟೆಗೆ ಬಂದು ಮಾರುವುದರಿಂದ ಕೊಳ್ಳುವವರ ಸಂಖ್ಯೆ ಹೆಚ್ಚಾಗಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗುತ್ತದೆ ಹಾಗೂ ಬೆಳೆದ ಫಲವನ್ನೆಲ್ಲ ಒಟ್ಟಿಗೆ ಕೊಡುವ ಬದಲು ಅವುಗಳನ್ನು ಅಳತೆ ಹಾಗೂ ಗುಣಮಟ್ಟದ ಆಧಾರದ ಮೇಲೆ ವಿಂಗಡಿಸಿ ಮಾರುವುದರಿಂದ ಉತ್ತಮ ಲಾಭ ಪಡೆಯಬಹುದು ಎಂದು ತೆಂಗಿನಕಾಯಿ ವಿಂಗಡಿಸಿ ಮಾರಿ ತೋರಿಸಿಕೊಟ್ಟಿದ್ದರು.
ಮಳೆ ಅಭಾವ ಹಾಗೂ ಸೂಕ್ತ ಬೆಲೆ ಸಿಗದೆ ಕೃಷಿ ಕಷ್ಟದಾಯಕವೆಂದು ಭಾವಿಸಿ ಭೂಮಿಯನ್ನು ಪಾಳು ಬಿಟ್ಟು ಪಟ್ಟಣಕ್ಕೆ ಹೋಗುವವರು ಲಾಭದಾಯಕ ಕೃಷಿಯ ಬಗ್ಗೆ ಅರಿವು ಪಡೆಯಬೇಕು. ತಮ್ಮ ತೆಂಗು, ಅಡಿಕೆಯ ಬೆಳೆಯ ಜತೆಗೆ ಹಣ್ಣು, ತರಕಾರಿ, ಹೂವು ಬೆಳೆದಲ್ಲಿ ಒಂದು ಬೆಳೆ ಕೈ ಕಚ್ಚಿದರೆ ಮತ್ತೊಂದು ಬೆಳೆ ಕೈಹಿಡಿಯುತ್ತದೆ. ಬರುವ ಮಳೆ ನೀರನ್ನು ಜಮೀನಿನಲ್ಲಿ ಇಂಗಿಸಲು ಒತ್ತು ಕೊಟ್ಟಾಗ ಮಳೆ ಇಲ್ಲದಿದ್ದರೂ ಭೂಮಿಯ ತೇವಾಂಶ ಬೆಳೆಯನ್ನು ರಕ್ಷಿಸುತ್ತದೆ. ತಾವು ಕೇವಲ ಪ್ರಚಾರ ಹಾಗೂ ತೋರಿಕೆಗೆ ಹೇಳುತ್ತಿಲ್ಲ, ಇದೇ ಪದ್ಧತಿ ಅಳವಡಿಸಿ ತಮ್ಮ ಕೃಷಿ ಫಾರಂನಲ್ಲಿ ತರಹೇವಾರಿ ತರಕಾರಿ, ಹಣ್ಣು, ಪುಷ್ಪಗಳನ್ನು ಬೆಳೆಯುತ್ತಿರುವುದಾಗಿ ಹೇಳಿದ್ದರು. ಅಲ್ಲದೆ ತಮ್ಮ ಜಮೀನಿಗೆ ಕರೆದೊಯ್ದು ಮಾಹಿತಿ ಸಹ ನೀಡಿದ್ದರು.ಕೃಷಿಯನ್ನು ಕಷ್ಟಪಟ್ಟು ಮಾಡದೆ ಇಷ್ಟ ಪಟ್ಟು ಮಾಡಬೇಕು.

Leave a Reply

Your email address will not be published. Required fields are marked *

error: Content is protected !!