ಉದಯವಾಹಿನಿ, ಬೆಳಗಾವಿ: ಬಹುಭಾಷಾ ನಟಿ ಕನ್ನಡ ಚಿತ್ರರಂಗದ ಹಿರಿಯ ಅಭಿನೇತ್ರಿ ಡಾ.ಲೀಲಾವತಿ ಅವರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಗೌರವ ಸೂಚಿಸಲಾಯಿತು.
ಸಂತಾಪ ಸೂಚಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೆಲವರು ಬದುಕಿದ್ದಾಗಲೂ ಸತ್ತಂತಿರುತ್ತಾರೆ. ಇನ್ನೂ ಕೆಲವರು ಸತ್ತ ಮೇಲೂ ಬದುಕಿರುತ್ತಾರೆ ಅಂತಹವರ ಸಾಲಿಗೆ ಲೀಲಾವತಿ ಸೇರುತ್ತಾರೆ ಎಂದರು.
ತಾವು ಬಂಧೀಖಾನೆ ಮಂತ್ರಿಯಾಗಿದ್ದಾಗ ಲೀಲಾವತಿ ಅವರು ಚಿತ್ರವೊಂದರ ಚಿತ್ರೀಕರಣಕ್ಕೆ ಇಲಾಖೆಗೆ ಹಣ ಭರ್ತಿ ಮಾಡಿ ಬಂಧೀಖಾನೆ ಇಲಾಖೆಯಿಂದ ಜೈಲಿನಲ್ಲಿ ಚಿತ್ರೀಕರಣಕ್ಕೆ ಅನುಮತಿ ಪಡೆದುಕೊಂಡಿದ್ದರು. ಆದರೆ ಆಗಿನ ಮುಖ್ಯಮಂತ್ರಿ ಬಂಗಾರಪ್ಪ ಅವರ ಕಚೇರಿಯಿಂದ ದೂರವಾಣಿ ಕರೆಯೊಂದು ಹೋಗಿತ್ತು. ಅದಕ್ಕಾಗಿ ಒತ್ತಡ ಹಾಕಿದ್ದವರು ಯಾರು ಎಂದು ನಾನು ಹೇಳ ಬಯಸುವುದಿಲ್ಲ ಆದರೆ ಅನುಮತಿ ನಿರಾಕರಿಸಲಾಗಿತ್ತು. ಆ ವೇಳೆ ಲೀಲಾವತಿಯವರು ತಮ್ಮ ಬಳಿ ಬಂದು ಕಷ್ಟ ಹೇಳಿಕೊಂಡಿದ್ದರು.
ಎಲ್ಲರಿಗೂ ನಾವು ಅನುಮತಿ ಕೊಡುವುದಾದರೆ ಲೀಲಾವತಿಯವರಿಗೆ ಏಕೆ ಅವಕಾಶ ನಿರಾಕರಿಸಬೇಕೆಂದು ತಾವು ಮಧ್ಯಪ್ರವೇಶ ಮಾಡಿ, ಅನುಮತಿ ಕೊಡಿಸಿದ್ದಾಗಿ ತಿಳಿಸಿದರು.
ಸ್ವಾಭಿಮಾನ, ಬಡತನದ ಜೊತೆಗೆ ಅಜಾತಶತ್ರುವಾಗಿದ್ದ ಲೀಲಾವತಿಯವರು ಹೃದಯ ಶ್ರೀಮಂತಿಕೆ ಹೊಂದಿದ್ದರು. ಜನರ ಆರೋಗ್ಯದ ಚಿಕಿತ್ಸೆಗೆ ಆಸ್ಪತ್ರೆ ಕಟ್ಟಿಸುವುದು ಸಾಮಾನ್ಯ. ಆದರೆ ಲೀಲಾವತಿಯವರು ಪ್ರಾಣಿಗಳ ಮೇಲಿನ ಪ್ರೀತಿಯಿಂದ ಪಶು ಆಸ್ಪತ್ರೆ ಕಟ್ಟಿಸಿದ್ದಾರೆ. ಅದರ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಲು ಬಂದಾಗ ಅವರಿಗಿನ್ನೂ ಆರೋಗ್ಯ ಚೆನ್ನಾಗಿತ್ತು ಮಾತನಾಡುತ್ತಿದ್ದರು.ಎಲ್ಲವನ್ನೂ ಗುರುತಿಸುತ್ತಿದ್ದರು. ಆದರೆ ವೆಂಟಿಲೇಟರ್ ನಲ್ಲೇ ನಮ್ಮ ಮನೆಗೆ ಬಂದಿದಿದ್ದರು. ಆ ಸ್ಥಿತಿಯಲ್ಲಿ ತಾಯಿಯನ್ನು ಕರೆತಂದಿದ್ದಕ್ಕಾ?ಗಿ ವಿನೋದ್ ರಾಜ್ ರನ್ನು ತಾವು ತರಾಟೆಗೆ ತೆಗೆದುಕೊಂಡಿದ್ದಾಗಿ ಡಿ.ಕೆ.ಶಿವಕುಮಾರ್ ಹೇಳಿದರು.
