ಉದಯವಾಹಿನಿ,ಬೆಂಗಳೂರು : ವಾಣಿಜ್ಯ ಕಟ್ಟಡಗಳ ಕಲುಷಿತ ನೀರನ್ನು ಸಂಸ್ಕರಣೆ ಮಾಡದೆ ಚಿಕ್ಕಜಾಲ ಕೆರೆಗೆ ಬಿಡುತ್ತಿದ್ದಾರೆಂದು ಆರೋಪಿಸಿ ಚಿಕ್ಕಜಾಲ ಪಿಡಿಓ ವಿರುದ್ದ ಕೊಳಚೆ ನೀರು ಸಂಸ್ಕರಣಾ ಘಟಕದ ಎದುರು ಸ್ಥಳೀಯರು ಪ್ರತಿಭಟನೆ ನಡೆಸಿದರು.ತಾ.ಪಂ.ಮಾಜಿ ಸದಸ್ಯ ಉದಯ್ ಶಂಕರ್ ನೇತೃತ್ವದಲ್ಲಿಂದು ನೀರು ಶುದ್ಧೀಕರಣ ಘಟಕದ ಎದುರು ಜಮಾಯಿಸಿದ ಪ್ರತಿಭಟನಾಕಾರರು ಸಂಸ್ಕರಣೆ ಮಾಡದೆ ಯಾವುದೇ ಕಾರಣಕ್ಕೂ ನೀರನ್ನು ಹರಿಸಬಾರದು ಎಂದು ಒತ್ತಾಯಿಸಿದರು.ಚಿಕ್ಕಜಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಲಕ್ಷ್ಮಿ ಎಂಟರ್‌ಪ್ರೈಸಸ್‌ನ ಕಲುಷಿತ ನೀರನ್ನು ಹರಿಸಲು ಹರಿಸಲಾಗುತ್ತಿದೆ. ಲಕ್ಷಾಂತರ ರೂ ಹಣ ಪಡೆದು ಈ ಭ್ರಷ್ಟಾಚಾರ ಮಾಡಲಾಗುತ್ತಿದೆ. ಪಿಡಿಓ ವೆಂಕಟೇಶ್ ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.ಚಿಕ್ಕಜಾಲ ಪಂಚಾಯಿತಿ ವ್ಯಾಪ್ತಿಯಲ್ಲಿ ೪ ವಾರ್ಡ್‌ಗಳಿವೆ. ಈ ಪೈಕಿ ಎರಡು ವಾರ್ಡ್ ಯುಜಿಡಿ ಸಂಪರ್ಕ ಕಲ್ಪಿಸಲಾಗಿದೆ. ಸಾಮರ್ಥ್ಯಕ್ಕೆ ಮೀರಿ ಹೆಚ್ಚುವರಿ ನೀರು ಹರಿಸುತ್ತಿರುವುದರಿಂದಾಗಿ ಸಂಸ್ಕರಣಾ ಘಟಕದಲ್ಲಿ ನೀರು ಶುದ್ದೀಕರಣಗೊಳ್ಳುತ್ತಿಲ್ಲ. ಜೊತೆಗೆ ಅದಕ್ಕೆ ಅಗತ್ಯವಿರುವ ರಸಾಯನಿಕವನ್ನು ಹಾಕುತ್ತಿಲ್ಲ ಎಂದು ತಾ.ಪಂ.ಮಾಜಿ ಸದಸ್ಯ ಉದಯ್ ಕುಮಾರ್ ದೂರಿದರು.
ಈ ಕಲುಷಿತ ನೀರಿನಿಂದ ಗ್ರಾಮಸ್ಥರು ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಸಾವು ನೋವುಗಳು ಸಂಭವಿಸುತ್ತವೆ. ಹೀಗಾಗಿ, ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು. ಗಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಪಂಚಾಯತ್, ಗ್ರಾಮೀಣಾಭಿವೃದ್ಧಿ ಮಂತ್ರಿಗಳಾದ ಪಿಯಾಂಕ್ ಖರ್ಗೆಯವರಿಗೂ ಪತ್ರ ಬರೆಯಲಾಗಿದೆ ಈ ಕೂಡಲೇ ಇತ್ತ ಗಮನ ಹರಿಸಿ ಅಕ್ರಮದ ಬಗ್ಗೆ ತನಿಖೆಯಾಗಬೇಕು. ಜೊತೆಗೆ ಪಿಡಿಓ ವೆಂಕಟೇಶ್ ಅವರನ್ನು ಈ ಕೂಡಲೇ ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
