ಉದಯವಾಹಿನಿ, ಬೆಳಗಾವಿ: ವಯಸ್ಸಾದ ಪೋಷಕರು ರಸ್ತೆಗೆ ಎಸೆಯುವಂತ ಪರಿಸ್ಥಿತಿ ನಿರ್ಮಾಣ ಆಗಿರುವ ಈ ಕಾಲದಲ್ಲಿ ತಾಯಿಯನ್ನು ಮಗುವಂತೆ ನೋಡಿಕೊಂಡ ವಿನೋದ್ ರಾಜ್ ಕುಮಾರ್ ಈ ಸಮಾಜಕ್ಕೆ ಮಾದರಿ ಎಂದು ಹಿರಿಯ ನಟಿ, ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಹೇಳಿದ್ದಾರೆ.
ವಿಧಾನ ಪರಿಷತ್ತಿನ ಕಲಾಪದಲ್ಲಿಂದು ಲೀಲಾವತಿ ಅವರಿಗೆ ಸಂತಾಪ ಸೂಚನೆ ಸಂದರ್ಭದಲ್ಲಿ ಪ್ರಸ್ತಾಪಿಸಿದ ಅವರು, ವಿನೋದ್ ರಾಜ್ ಕುಮಾರ್ ಅವರು ಅನಾಥರಲ್ಲ.ಅವರೊಂದಿಗೆ ನಾವೆಲ್ಲಾ, ಈ ಸಮಾಜವೇ ನಿಂತಿದೆ. ಅವರು ತಾಯಿಯನ್ನು ನೋಡಿಕೊಂಡು ಪರಿಯೂ ಈ ಸಮಾಜಕ್ಕೆ ಮಾದರಿಯಾಗಿದೆ ಎಂದು ನುಡಿದರು. ಲೀಲಾವತಿ ಅವರು ಎಲ್ಲಾ ಪಾತ್ರಗಳನ್ನು ಮಾಡುವ ಮೂಲಕ ಹೊಸ ಕಲಾವಿದರಿಗೆ ದೊಡ್ಡ ಗ್ರಂಥವೇ ಆಗಿದ್ದಾರೆ. ಜತೆಗೆ, ತಮ್ಮ ಜೀವನದ ಕೊನೆಯವರೆವಿಗೂ ಭೂ ತಾಯಿಯ ಸೇವೆ ಮಾಡಿದ ಮಣ್ಣಿನ ಮಗಳಾಗಿದ್ದರು ಎಂದು ಹೇಳಿದರು.
ಮದುವೆ ಮಾಡಿ ನೋಡು, ಸಂತ ತುಕರಾಂ ಚಿತ್ರಗಳಲ್ಲಿನ ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿ, ತುಂಬಿದಕೊಡ, ಮಹಾತ್ಯಾಗ, ಭಕ್ತಕುಂಬಾರ, ಸಿಪಾಯಿ ರಾಮು, ಗೆಜ್ಜೆಪೂಜೆ ಸಿನಿಮಾದ ನಟನೆಗಾಗಿ ರಾಜ್ಯ ಪ್ರಶಸ್ತಿ, ಡಾ:ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ, ಪೋಷಕ ನಟನೆಗಾಗಿ ಮೂರು ಬಾರಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ೨೦೦೮ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅವರ ಜೀವನೇ ಸಂಘರ್ಷ ಹಾಗೂ ಸಾಧನೆ ಎಂದು ಅಭಿಪ್ರಾಯಪಟ್ಟರು.

 

Leave a Reply

Your email address will not be published. Required fields are marked *

error: Content is protected !!