ಉದಯವಾಹಿನಿ,ಬೆಳಗಾವಿ: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ವೃದ್ಧ ಹುಸೇನ್ ಬಾಷಾ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸೈಯದ್ ಅಶ್ರಫ್ ತಿಳಿಸಿದ್ದಾರೆ.
ನಗರದಲ್ಲಿಂದು ಹುಸೇನ್ ಬಾಷಾ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ.೨೫ರಂದು ನಸುಕಿನ ವೇಳೆ ಸುಮಾರ ೪ ಗಂಟೆಗೆ ಇಬ್ಬರು ಯುವಕರು ಗಂಗಾವತಿ ಬಸ್ ನಿಲ್ದಾಣದ ಬಳಿ ಇದ್ದ ಹುಟ್ಟಿನಿಂದ ಅಂಧರಾಗಿರುವ ಹುಸೇನ್ ಬಾಷಾ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದರು.
ಅಲ್ಲದೆ, ಹುಸೇನ್ ಬಾಷಾ ಗಡ್ಡವನ್ನು ಗಾಜಿನಿಂದ ಕತ್ತರಿಸಲು ಪ್ರಯತ್ನಿಸಿದ್ದಾರೆ. ಇದಾದ ನಂತರ ಗಡ್ಡಕ್ಕೆ ಬೆಂಕಿ ಹಚ್ಚಿ, ರೈಲ್ವೆ ಸೇತುವೆಯ ಗೋಡೆಗೆ ಅವರ ತಲೆಯನ್ನು ಹೊಡೆಸಿದ್ದಾರೆ. ನೆಲದ ಮೇಲೆ ಬೀಳಿಸಿ ಅವರ ಎದೆಯ ಮೇಲೆ ಕಾಲಿರಿಸಿ,ಬಲವಂತದಿಂದ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿಸಿದ್ದಾರೆ ಎಂದು ಅವರು ಹೇಳಿದರು.ಅದೃಷ್ಟವಶಾತ್ ಆ ಸಂದರ್ಭದಲ್ಲಿ ಕುರಿಗಾಹಿ ದಂಪತಿಗಳು ತಮ್ಮ ಕುರಿಗಳೊಂದಿಗೆ ಆ ಮಾರ್ಗದಲ್ಲಿ ಬಂದಿದ್ದರಿಂದ ಅವರೊಂದಿಗೆ ಇದ್ದ ನಾಯಿ ಆರೋಪಿಗಳನ್ನು ಕಂಡು ಬೊಗಳಲು ಆರಂಭಿಸಿದ್ದರಿಂದ ಹುಸೇನ್ ಬಾಷಾ ಅವರ ಪ್ರಾಣ ಉಳಿಯಿತು ಎಂದು ಸೈಯದ್ ಅಶ್ರಫ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!