ಉದಯವಾಹಿನಿ, ಬೆಳಗಾವಿ: ರಾಜ್ಯದಲ್ಲಿನ ಹುಕ್ಕಾಬಾರ್‌ಗಳನ್ನು ನಿಷೇಧ ಮಾಡಲು ಪ್ರಯತ್ನ ನಡೆಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ವಿಧಾನಸಭೆಯಲ್ಲಿ ಇಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಸಿ.ಕೆ.ರಾಮಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿನ ಇನ್ನಿತರ ನಗರಗಳಲ್ಲಿನ ಹುಕ್ಕಾಬಾರ್ ಸೇರಿದಂತೆ ಮಾದಕ ವಸ್ತುಗಳ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದ್ದು ಈ ಸಂಬಂಧ ವಿವಿಧ ಇಲಾಖೆಗಳ ಜೊತೆ ಸಭೆ ನಡೆಸಿ ಹುಕ್ಕಾ ಬಾರ್ ನಿಷೇಧಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು ನಗರದಲ್ಲಿ ಹುಕ್ಕಾಬಾರ್‌ಗಳ ಪ್ರಮಾಣ ಹೆಚ್ಚಾಗಿದ್ದು,ನಿಯಮ ಮೀರಿ ಹುಕ್ಕಾಬಾರ್ ನಡೆಸಿದರೆ ಪೊಲೀಸರು ದಾಳಿ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಹುಕ್ಕಾಬಾರ್‌ಗಳಿಗೆ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಯಾವುದೇ ರೀತಿಯ ಪರವಾನಗೆ ನೀಡುವುದಿಲ್ಲ. ಆದರೆ, ಕಾಫಿ, ಟೀ ಬಾರ್ ಮಾದರಿಯಲ್ಲೇ ಹುಕ್ಕಾಬಾರ್‌ಗಳ ಮಾಲಕರು ೨೦೨೨ರಿಂದಲೂ ರಾಷ್ಟ್ರೀಯ ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಅನುಮತಿ ಪಡೆದು ಹುಕ್ಕಾಬಾರ್‌ಗಳನ್ನು ನಡೆಸುತ್ತಿದ್ದಾರೆ.
