ಉದಯವಾಹಿನಿ, ಬೆಂಗಳೂರು: ಕೆರೆ ಒತ್ತುವರಿ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೆರೆಯನ್ನು ಜಿಲ್ಲಾಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.ಜೊತೆಗೆ ಕೆರೆಗೆ ಬಿಗಿ ಭದ್ರತೆ ಒದಗಿಸಲಾಗಿದೆ.ಜಿಲ್ಲಾಡಳಿತ ಕೆರೆಗೆ ಪ್ರವೇಶಿಸುವ ಮಾರ್ಗಗಳನ್ನು ಮುಚ್ಚಿದೆ.ಜಿಗಣಿಯಲ್ಲಿರುವ ಹೆನ್ನಾಗರ ಕೆರೆಯನ್ನು ಖಾಸಗಿ ಕಂಪನಿಯೊಂದು ಒತ್ತುವರಿ ಮಾಡಿಕೊಂಡಿದೆ. ಕೆರೆಯೊಳಗೆ ಮಣ್ಣು ಹಾಕಿ ಮುಚ್ಚಲು ಯತ್ನಿಸುತ್ತಿದ್ದಾರೆ ಎಂದು ಹೆನ್ನಾಗರ ಕೆರೆ ಒತ್ತುವರಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆನೇಕಲ್ ತಹಸೀಲ್ದಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಅಧಿಕಾರಿಗಳು ಕೆರೆ ಒತ್ತುವರಿಯನ್ನು ಪರಿಶೀಲಿಸಿ ಖಾಸಗಿ ಕಂಪನಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಲಾರಿಗಳಲ್ಲಿ ಮಣ್ಣು ಸಾಗಿಸಿ ಮುಚ್ಚಲು ಯತ್ನಿಸುತ್ತಿದ್ದವರನ್ನು ತಡೆದಿದ್ದಾರೆ. ಇದೀಗ ಕೆರೆಯ ಪ್ರವೇಶ ದ್ವಾರಗಳನ್ನು ಬ್ಯಾರಿಕೇಡ್ ಹಾಕಿ ಕಬ್ಬಿಣದ ಸರಳುಗಳಿಂದ ಮುಚ್ಚಲಾಗಿದೆ.ಯಾವುದೇ ವಾಹನಗಳು ಒಳಗೆ ಪ್ರವೇಶಿಸದಂತೆ ನೋಡಿಕೊಳ್ಳಲಾಗಿದೆ.
