ಉದಯವಾಹಿನಿ, ಬೆಂಗಳೂರು: ಪಿ ಜಿ ಹಾಸ್ಟೆಲ್‌ಗಳಲ್ಲಿ ಮೊಬೈಲ್ ಲ್ಯಾಪ್‌ಟಾಪ್ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಮೂವರು ಕುಖ್ಯಾತ ಖದೀಮರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿ ೧೬ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ. ತಮಿಳುನಾಡು ಮತ್ತು ಆಂಧ್ರಪ್ರದೇಶ ಮೂಲದ ಯುವರಾಜ್ (೧೯)ಪ್ರಭು(೨೦)ಹಾಗೂ ಸೆಲ್ವರಾಜ್ (೨೫)ಬಂಧಿತ ಆರೋಪಿಗಳಾಗಿದ್ದು,ಬಂಧಿತರಿಂದ ೧೬ ಲಕ್ಷ ಮೌಲ್ಯದ ೫೦ ವಿವಿಧ ಕಂಪನಿ ಲ್ಯಾಪ್ ಟಾಪ್‌ಗಳು, ೭ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉತ್ತರ ವಿಭಾಗದಲ್ಲಿ ಕೆಲವು ದಿನಗಳಿಂದ ಪಿ.ಜಿ.ಹಾಸ್ಟೆಲ್, ಲಾಡ್ಜ್ ಗಳಲ್ಲಿ ಮೊಬೈಲ್ ಲ್ಯಾಪ್‌ಟಾಪ್‌ಗಳು ಕಳವಾಗಿರುವ ಪ್ರಕರಣಗಳು ಹೆಚ್ಚುತ್ತಿದ್ದು ಇದನ್ನು ಗಂಭೀರ ಪರಿಗಣಿಸಿ ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತಂಡವು ಕಳೆದ ನ. ೨೯ ರಂದು ಸಂಜೆ ಮತ್ತಿಕೆರೆಯ ರಾಮಯ್ಯ ಕಾಲೇಜ್ ಬಳಿ ಗಸ್ತಿನಲ್ಲಿರುವಾಗ ಬಂಧಿತರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದು ಅವರನ್ನು ಹಿಡಿದು ಪ್ರಶ್ನಿಸಲಾಗಿ ಅವರುಗಳ ಬಳಿ ೭ ಮೊಬೈಲ್ ಗಳು ಪತ್ತೆಯಾಗಿದ್ದವು, ಠಾಣೆಗೆ ಕರೆತಂದು, ವಿಚಾರ ಮಾಡಿದಾಗ ಲ್ಯಾಪ್‌ಟಾಪ್ ಕಳವು ಮಾಡಿರುವುದನ್ನು ತಿಳಿಸಿದ್ದು,ಆರೋಪಿಗಳನ್ನು ಬಂಧಿಸಲಾಯಿತು.
ಮೂವರನ್ನು ವಿಚಾರಣೆಗೊಳಪಡಿಸಿದಾಗ ಅವರುಗಳ ಬಳಿ ಇರುವ ಮೊಬೈಲ್ ಗಳು ಕಳವು ಮಾಡಿ, ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದು, ಕಾಲೇಜ್ ವಿದ್ಯಾರ್ಥಿಗಳು ಹೆಚ್ಚಾಗಿ ವಾಸವಾಗಿರುವ ಪ್ರದೇಶಗಳಲ್ಲಿ ಸುತ್ತಾಡಿ, ಪಿ.ಜಿ., ಹಾಸ್ಟೆಲ್‌ಗಳನ್ನು ಗುರುತಿಸಿಕೊಂಡು ಅವರುಗಳು ಬೆಳಗಿನ ಸಮಯದಲ್ಲಿ ವಾಯು ವಿಹಾರ ಮತ್ತು ಇತರೆ ಕಡೆಗಳಲ್ಲಿ ಹೋಗುವ ಸಮಯವನ್ನು ಗಮನಿಸಿಕೊಂಡು ಅವರುಗಳ ಕೊಠಡಿಗೆ ಹೋಗಿ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ.
