ಉದಯವಾಹಿನಿ, ಬೆಂಗಳೂರು: ಬೆಳಗಾವಿಯ ಸುವರ್ಣಸೌಧದ ವಿಧಾನಮಂಡಲ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯನ್ನು ತಿರುಚಿದ ವಿಡಿಯೋವನ್ನು ಹಂಚಿಕೊಂಡಿದ್ದ ತೆಲಂಗಾಣದ ಬಿಆರ್‍ಎಸ್ ಪಕ್ಷದ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಮಾಜಿ ಸಚಿವರೂ ಆಗಿರುವ ಬಿಆರ್‍ಎಸ್‍ನ ಕೆ.ಟಿ.ರಾಮರಾವ್ ಅವರು ಬಿಜೆಪಿಯ ಐಟಿ ಸೆಲ್‍ನಿಂದ ವೈರಲ್ ಮಾಡಿದ್ದ ವಿಡಿಯೋವನ್ನು ಹಂಚಿಕೊಂಡು ಕರ್ನಾಟಕದಲ್ಲಿ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಹಣವಿಲ್ಲ ಎಂದು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ತೆಲಂಗಾಣದಲ್ಲೂ ಇದೇ ರೀತಿಯ ವಾತಾವರಣ ನಿರ್ಮಾಣವಾಗಲಿದೆ. ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ದಿಕ್ಕು ತಪ್ಪಿಸಿ ಅಧಿಕಾರ ಹಿಡಿಯುವ ಮೊದಲು ತಾವು ನೀಡುವ ಭರವಸೆಗಳ ಬಗ್ಗೆ ತನಿಖಾ ಪ್ರಮಾಣದ ಅಧ್ಯಯನವನ್ನಾದರೂ ನಡೆಸಬೇಕಿತ್ತಲ್ಲವೇ ಎಂದು ಕೆ.ಟಿ.ಆರ್ ಪ್ರಶ್ನಿಸಿದ್ದಾರೆ.
ಇದಕ್ಕೆ ಸಾಮಾಜಿಕ ಜಾಲತಾಣದಲ್ಲೇ ತಿರುಗೇಟು ನೀಡಿರುವ ಸಿದ್ದರಾಮಯ್ಯ, ತೆಲಂಗಾಣದಲ್ಲಿ ನಿಮ್ಮ ಪಕ್ಷ ಏಕೆ ಸೋತಿದೆ ಎಂದು ನಿಮಗೆ ಗೊತ್ತಿದೆಯೇ?, ನಿಮಗೆ ಕನಿಷ್ಟ ನಕಲಿಯಾದ ಅಥವಾ ತಿರುಚಿದ ವಿಡಿಯೋವನ್ನು ಗುರುತಿಸಲು ಸಾಧ್ಯವಾಗಿಲ್ಲ, ಸತ್ಯವನ್ನು ಕಂಡುಕೊಳ್ಳಲು ಬರುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.
