ಉದಯವಾಹಿನಿ, ಧಾರವಾಡ: ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸುಮಾರು 800 ರಿಂದ 1,000 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದ್ದು, ಕೃಷಿ ಇಲಾಖೆಯ ರೈತಸಿರಿ ಯೋಜನೆ ಮೂಲಕ ಸಿರಿಧಾನ್ಯ ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣಕುಮಾರ ಎಂ. ಅವರು ಹೇಳಿದರು.
ಕೃಷಿ ಇಲಾಖೆಯಿಂದ ಸಿರಿಧಾನ್ಯಗಳ ಬಳಕೆಯ ಕುರಿತು ಜಾಗೃತಿ ಮೂಡಿಸಲು ಸಿರಿಧಾನ್ಯಗಳ ಜಾಗೃತಿ ವಾಕ್‍ಥಾನ್ (ಜಾಥಾ) ಕಾರ್ಯಕ್ರಮಕ್ಕೆ ಕಲಾಭವನದ ಆವರಣದಲ್ಲಿ ಚಾಲನೆ ನೀಡಿ, ಮಾತನಾಡಿದರು.
ಸಿರಿ ಧಾನ್ಯಗಳೆಂದರೆ ರಾಗಿ, ಹಾರಕ, ನವಣೆ, ಸಾಮೆ, ಬರಗು, ಕೊರಲೆ ಊದಲು, ಸಜ್ಜೆ ಮತ್ತು ಜೋಳಗಳ ಸಮೂಹ. ಇವುಗಳಿಗೆ ಸುಮಾರು 5 ಸಾವಿರ ವರ್ಷಗಳ ಬೇಸಾಯದ ಇತಿಹಾಸವಿದೆ.
ಸಿರಿಧಾನ್ಯಗಳು ಪ್ರಸ್ತುತ ಸನ್ನಿವೇಶದಲ್ಲಿ ಪ್ರಮುಖ ಆಹಾರ ಬೆಳೆಗಳಾಗುತ್ತಿವೆ. ಅತೀ ಕಡಿಮೆ ಮಳೆ ಇರುವ ಪ್ರದೇಶಗಳಲ್ಲಿ, ಶುಷ್ಕ, ಒಣ ಪರಿಸ್ಥಿತಿಗಳಲ್ಲಿ, ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿ ಸಹ ಬೆಳೆಯಬಹುದಾಗಿದೆ. ಮತ್ತು ಇದಕ್ಕೆ ಕನಿಷ್ಠ ಕೃಷಿ ಪರಿಕರಗಳ ಬಳಕೆ ಆಗುತ್ತದೆ .
ನಾರು, ಕಬ್ಬಿಣಾಂಶಗಳು, ಕಾರ್ಬೊಹೈಡ್ರೆಟ್‍ಗಳು ಮತ್ತು ಕೊಬ್ಬಿನಾಂಶಗಳು ಬೇರೆಯ ಧಾನ್ಯಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಮತ್ತು ಇವುಗಳಲ್ಲಿ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್‍ಗಳು ಮತ್ತು ರೋಗ ನಿರೋದಕ ಶಕ್ತಿ ಇರುತ್ತದೆ. ಆದ್ದರಿಂದ ಇವು ಪೌಷ್ಟಿಕತೆಗಳ ಕಣಜಗಳೇ ಆಗಿವೆ. ಆಹಾರ ಕ್ರಮದಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಪಡೆಯಲು ಸಾಧ್ಯವಾಗದ ಜನಸಾಮಾನ್ಯರಿಗೆ ಪೌಷ್ಠಿಕಾಂಶದ ಭದ್ರತೆಯನ್ನು ಇವು ಖಾತರಿಪಡಿಸುತ್ತವೆ.
