ಉದಯವಾಹಿನಿ, ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಎರಡು ಪಕ್ಷಗಳ ನಡುವಿನ ಸೀಟು ಹಂಚಿಕೆ ಬಹುತೇಕ ಅಂತಿಮಗೊಂಡಿದೆ. ಸುದ್ದಿ ಮೂಲಗಳ ಪ್ರಕಾರ ಬಿಜೆಪಿ 24 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, 4 ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ ಎಂದು ಹೇಳಲಾಗಿದೆ.ಬಿಜೆಪಿ ಹೈಕಮಾಂಡ್ ಜತೆ ಮಾತುಕತೆ ನಡೆಸಿದ ನಂತರ 4 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಜೆಡಿಎಸ್ ನಿರ್ಧಾರ ಕೈಗೊಂಡಿದೆ. ಹಾಸನ, ಮಂಡ್ಯ, ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಬಹುತೇಕ ಫಿಕ್ಸ್ ಎನ್ನಲಾಗಿದೆ. ಮೈಸೂರು ಅಥವಾ ತುಮಕೂರು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರ ಆಯ್ಕೆ ಮಾಡುವಂತೆ ಬಿಜೆಪಿ ಹೈಕಮಾಂಡ್ ಜೆಡಿಎಸ್ಗೆ ಸಲಹೆ ನೀಡಿದೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಜನವರಿ ಅಂತ್ಯದ ವೇಳೆಗೆ ಸೀಟು ಹಂಚಿಕೆ ಪೂರ್ಣಗೊಳ್ಳಲಿದೆ. ಯಾರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ನಾವು ಕುಳಿತು ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ.
