ಉದಯವಾಹಿನಿ, ಕೊಟ್ಟೂರು: ಪಟ್ಟಣದ ಆರಾಧ್ಯ ದೈವ, ಪವಾಡ ಪುರುಷ ಎಂದೇ ಪ್ರಖ್ಯಾತವಾಗಿರುವ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವ ಹಾಗೂ ಬೆಳ್ಳಿರಥೋತ್ಸವ ಇದೇ 25 ರಂದು ಅಂದರೆ ನಾಳೆ ಅದ್ದೂರಿಯಾಗಿ ಜರುಗಲಿದೆ.
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕೊಟ್ಟೂರೇಶ್ವರ ಸ್ವಾಮಿಯ ಲಕ್ಷದೀಪೋತ್ಸವ ಮತ್ತು ಬೆಳ್ಳಿ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಲಿದೆ.
ಸ್ವಾಮಿಯ ಇತಿಹಾಸ:
ಕೈಲಾಸದಿಂದ ಧರೆಗಿಳಿದು ಬಂದ ಪಂಚಗಣಾಧೀಶರಲ್ಲಿ ಶ್ರೀ ಗುರುಬಸವೇಶ್ವರರು ಅಗ್ರಗಣ್ಯರು. ಪ್ರತಿದಿನವೂ ದೇವಸ್ಥಾನದಲ್ಲಿ ತ್ರಿಕಾಲ ಪೂಜೆ ನಡೆಸುತ್ತಾ ಬರಲಾಗುತ್ತಿದೆ ಭಕ್ತಾಧಿಗಳ ನೋವನ್ನು ಕಷ್ಟಗಳನ್ನು ನಿವಾರಿಸುತ್ತಾ ಭಕ್ತರನ್ನು ತಬ್ಬಿಕೊಂಡು ತನ್ನ ಕಡೆಗೆ ಸೆಳೆಯುವ ಕರುಣಾಮೂರ್ತಿಯೇ ಶ್ರೀ ಗುರುಬಸವೇಶ್ವರರು. ಸ್ವಾಮಿಯು ತನ್ನ ಮಹಿಮೆಯನ್ನು ತೋರಿದ ನಾಲ್ಕು ಮಠಗಳಿವೆ. ಮೊದಲು ತಾವು ಬಂದ ಸ್ಥಳವೇ ಮೂರು ಕಲ್ಲು ಮಠ. ಮಗುವಾಗಿ ನಂಬಿಯಕ್ಕನಿಗೆ ತಾಯಿಯ ಆನಂದವನ್ನುಂಟು ಮಾಡಿದ ಮಠವೇ ತೊಟ್ಟಿಲು ಮಠ ಹಾಗೂ ಜೀವಂತ ಸಮಾಧಿಯಾದ ಗಚ್ಚಿನಮಠ. ಸದಾ ಎಲ್ಲಾ ಧರ್ಮದವರಿಗೂ ಎಲ್ಲಾ ಸಮಯದಲ್ಲಿ ದರ್ಶನ ಕೊಡುತ್ತಿರುವುದೇ ಹಿರೇಮಠ, ಕೊಟ್ಟೂರೇಶ್ವರ ಸ್ವಾಮಿಯ ನಾಲ್ಕು ಮಠಗಳಿರುವುದು ವಿಶೇಷ.
ದೀಪಾವಳಿ ಪಾಡ್ಯದಂದು ಪ್ರಾರಂಭಗೊಂಡ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವು ಪ್ರತಿ ಸೋಮವಾರ ಮತ್ತು ಗುರುವಾರ ರಾತ್ರಿ ಕೊಟ್ಟೂರೇಶ್ವರನ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವು ಅದ್ದೂರಿ ಮೆರವಣಿಗೆ ಕೈಗೊಳ್ಳಲಾಗಿದ್ದು ಪಲ್ಲಕ್ಕಿಯಲ್ಲಿ ಕೊಟ್ಟೂರೇಶ್ವರನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಹೂಗಳಿಂದ ಅಲಂಕರಿಸಿ ಈ ಉತ್ಸವವನ್ನು ಕೊಟ್ಟೂರೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ತೊಟ್ಟಿಲಮಠದ ಮಾರ್ಗವಾಗಿ ಗಚ್ಚಿನ ಮಠದವರೆಗೆ ಪಲ್ಲಕ್ಕಿ ಉತ್ಸವದ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ. ನಾಳೆ ಕೊಟ್ಟೂರೇಶ್ವರ ಸ್ವಾಮಿಯ ಲಕ್ಷದೀಪೋತ್ಸವ ಜರುಗಲಿದೆ.
