ಉದಯವಾಹಿನಿ,ಕೆಂಗೇರಿ: ಹಬ್ಬ, ಜಾತ್ರೆ ಮಹೋತ್ಸವಗಳು ಜನರನ್ನು ಒಗ್ಗೂಡಿಸುವ ಸಾಧನಗಳಾಗಿದ್ದು ನಮ್ಮ ಪರಂಪರೆ ಇತಿಹಾಸದ ಭಾಗವಾಗಿವೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್ .ಟಿ. ಸೋಮಶೇಖರ್ ತಿಳಿಸಿದರು. ಯಶವಂತಪುರ ವಿಧಾನಸಭಾ ಕ್ಷೇತ್ರ ಕನಕಪುರ ಮುಖ್ಯರಸ್ತೆಯ ಸೋಮನಹಳ್ಳಿ ಶ್ರೀ ಹನುಮಾನ್ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ೭೬ನೇ ವಾರ್ಷಿಕೋತ್ಸವ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದ ಪ್ರತಿ ಗ್ರಾಮಗಳಲ್ಲಿ ಆಂಜನೇಯ ಸ್ವಾಮಿ ದೇವಾಲಯಗಳು ಇರುವುದು ವಿಶೇಷವಾಗಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದ ಎಲ್ಲಾ ಸಮುದಾಯಗಳು ಒಗ್ಗೂಡಿ ಕಾರ್ಯಕ್ರಮ ಆಯೋಜಿಸಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಿರುವುದು ನಮ್ಮೆಲ್ಲರ ಐಕ್ಯತೆಯ ಸಂಕೇತವಾಗಿದೆ ಎಂದು ಗ್ರಾಮಸ್ಥರ ಒಗ್ಗಟ್ಟಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಣ್ಣ ಸೋಮನಹಳ್ಳಿ ಶ್ರೀ ಹನುಮಾನ್ ಸೇವಾ ಸಮಿತಿಯ ಅಧ್ಯಕ್ಷ ಸತ್ಯನಾರಾಯಣ ರಾವ್ ಗಾಯಕ್ ವಾಡ್ ಮಾತನಾಡಿ ಮರಾಠ ಸಮುದಾಯದ ನಮ್ಮ ಹಿರಿಯರು ಸತತ ೭೫ ವರ್ಷಗಳಿಂದ ನಿರಂತರವಾಗಿ ಹನುಮ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿರುವುದು ಎಲ್ಲಾ ಸಮುದಾಯಗಳ ಜೊತೆಗಿನ ಉತ್ತಮ ಬಾಂಧವ್ಯದ ಸಂಕೇತವಾಗಿದೆ ಎಂದು ತಿಳಿಸಿದರು. ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳಲ್ಲಿ ನಾವೆಲ್ಲರೂ ಒಂದಾಗಿ ಭಾಗಿಯಾಗುವ ಮೂಲಕ ಸಂಸ್ಕೃತಿ ಪರಂಪರೆಯನ್ನು ಎತ್ತಿ ಹಿಡಿಯಬೇಕಿದೆ ಎಂದು ತಿಳಿಸಿದರು. ಅತ್ಯಂತ ವಿಜೃಂಭಣೆಯಿಂದ ನೆರವೇರಿದ ಹನುಮ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಸೋಮನಹಳ್ಳಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗಿಯಾಗಿ ಅತಿ ಭಾವದಿಂದ ಪೂಜೆ ಸಲ್ಲಿಸುವ ಮೂಲಕ ಆಂಜನೇಯ ಸ್ವಾಮಿ ಕೃಪೆಗೆ ಪಾತ್ರರಾದರು. ಇದೆ ವೇಳೆ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಉಪಾಧ್ಯಕ್ಷ ಜಿ.ಎಸ್. ಪುಟ್ಟೇಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಮುಖಂಡರು ಹಾಗೂ ಸೋಮನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
