ಉದಯವಾಹಿನಿ, ದೇವನಹಳ್ಳಿ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರಿಗೆ ಅಗತ್ಯ ಇರುವ ಶಿಕ್ಷಣ, ಆರೋಗ್ಯ, ಸ್ವಚ್ಛತೆ ಮತ್ತು ಕುಡಿಯುವ ನೀರು ಸೌಲಭ್ಯವನ್ನು ಒದಗಿಸಲು ಹೆಚ್ಚು ಒತ್ತು ನೀಡುತ್ತೇವೆ ಎಂದು ನಲ್ಲೂರು ಗ್ರಾ.ಪಂ. ಅಧ್ಯಕ್ಷ ಗಂಗಾಧರ್‌ಮೂರ್ತಿ ಹೇಳಿದರು.ತಾಲ್ಲೂಕಿನ ನಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿ, ಬೆಟ್ಟಕೋಟೆ ಕೆರೆಯಿಂದ ನಲ್ಲೂರು ಮಾರ್ಗವಾಗಿ ಬಿದಲಪುರ ಕೆರೆಗೆ ರಾಜಕಾಲುವೆ ನಿರ್ಮಾಣಕ್ಕೆ ಪಂಚಾಯತಿಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಇದು ಎರಡು ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಇರುವುದರಿಂದ ರಾಜಕಾಲು ನಿರ್ಮಿಸಲಾಗುತ್ತದೆ ಎಂದರು.
ನಲ್ಲೂರು ಗ್ರಾಮದ ಶಾಲೆಯನ್ನು ಮಾದರಿ ಶಾಲೆಯಾಗಿ ಪರಿವರ್ತನೆ ಮಾಡಲು ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.ಪಂಚಾಯಿತಿ ವ್ಯಾಪ್ತಿಯಲ್ಲಿ ಬಸ್ ಸಮಸ್ಯೆ ಹಾಗೂ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನಿಯೋಜನೆಗೆ ಜನ ಮನವಿ ಮಾಡಿದ್ದಾರೆ. ಈ ಸಂಬಂಧ ಮೇಲಾಧಿಕಾರಿಗಳೊಂದಿಗೆ ಮಾತನಾಡಲಾಗುವುದು ಎಂದು ತಿಳಿಸಿದರು.
ಅಭಿವೃದ್ಧಿ ಅಧಿಕಾರಿ ಸುಶೀಲಮ್ಮ ಮಾತನಾಡಿ, ಕಂದಾಯದ ಮೂಲಕ ಬರುವ ಹಣದಲ್ಲಿ ಗ್ರಾಮಗಳಲ್ಲಿ ಹಲವು ಸೌಲಭ್ಯ ಕಲ್ಪಿಸಲಾಗಿದೆ. ಅದೇ ರೀತಿ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಂಡು ಗ್ರಾಮಗಳ ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
