ಉದಯವಾಹಿನಿ, ಬೆಂಗಳೂರು: ಅತ್ಯಂತ ಸರಳವಾಗಿ ಜೀವನ ನಡೆಸಿದ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಎಲ್ಲ ಜಾತಿ, ಜನಾಂಗ, ಧರ್ಮದ ಭಕ್ತರ ಮನದಲ್ಲಿ ದೇವರಾಗಿ ನೆಲೆಸಿದ್ದಾರೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿಂದು ಆಯೋಜಿಸಲಾಗಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ತಮ್ಮ ಸರಳಾತಿ ಸರಳ ಜೀವನ ಮತ್ತು ಅರ್ಥಪೂರ್ಣ ಬೋಧನೆಗಳ ಮೂಲಕವೇ ಜನಮನಗೆದ್ದಿದ್ದ ಶ್ರೀಗಳ ಒಂದೊಂದು ಮಾತೂ ಮಾಣಿಕ್ಯ ಎಂದು ಬಣ್ಣಿಸಿದರು.
ರಾಜಕೀಯ, ಸಂಘ ಸಂಸ್ಥೆ ಮತ್ತು ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದ ಅವರು, ಬಸವ ತತ್ವ ಅನುಯಾಯಿಗಳಾಗಿದ್ದರು, ಅವರು ಹುಟ್ಟಿದ ನಡೆದಾಡಿದ ಈ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು, ಭಾಗ್ಯವಂತರು ಎಂದು ಹೇಳಿದರು.
ಸಿದ್ದೇಶ್ವರ ಶ್ರೀಗಳು ತೋರಿದ ನಿಸ್ವಾರ್ಥ ಸೇವೆ, ಸರಳ ಬದುಕನ್ನು ನಮ್ಮ ಬದುಕಲ್ಲಿ ಪ್ರಾಮಾಣಿಕವಾಗಿ ಅಳವಡಿಸಿಕೊಂಡರೆ ಸುಂದರ ಸಮಾಜದ ನಿರ್ಮಾಣ ಮಾಡಬಹುದು ಎಂದು ಈಶ್ವರ ಖಂಡ್ರೆ ತಿಳಿಸಿದರು.
ಈ ಸಂದರ್ಭದಲ್ಲಿ ಗೀತಾ ಈಶ್ವರ ಖಂಡ್ರೆ, ಡಾ. ಗುರು ಖಂಡ್ರೆ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!