ಉದಯವಾಹಿನಿ, ಕೆ.ಆರ್.ಪೇಟೆ: ತಾಲ್ಲೂಕಿನ ಪುರಾಣ ಪ್ರಸಿದ್ಧ ಕಲ್ಲಹಳ್ಳಿಯ ಭೂ ವರಾಹನಾಥ ಕ್ಷೇತ್ರದಲ್ಲಿ ಹೊಯ್ಸಳ ಮಾದರಿಯಲ್ಲಿ ದೇಗುಲದ ಪುನರ್ ನಿರ್ಮಾಣ ಕಾರ್ಯವು ಭರದಿಂದ ಸಾಗಿದ್ದು, ಸಂಪೂರ್ಣವಾಗಿ ಗ್ರಾನೈಟ್ ಕಲ್ಲಿನಿಂದಲೇ ದೇಗುಲ ನಿರ್ಮಿಸಲಾಗುತ್ತಿದೆ.ಮೈಸೂರಿನ ಪರಕಾಲ ಸ್ವಾಮಿ ಮಠವು ಮೂರು ವರ್ಷಗಳಲ್ಲಿ ಈ ಕಾಮಗಾರಿಯನ್ನು ಮುಗಿಸುವ ಸಂಕಲ್ಪ ಮಾಡಿದೆ.
ಅದರಂತೆ ಚೀನಾದ ಸಿಎನ್‌ಸಿ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಆಮದು ಮಾಡಿಕೊಂಡು ದೇವಾಲಯದ ಕಂಬಗಳು ಹಾಗೂ ಇತರೆ ನವರಂಗ ಶಿಲ್ಪಗಳ ಕೆತ್ತನೆಯ ಕೆಲಸವನ್ನು ಮಾಡಲಾಗುತ್ತಿದೆ.
ರೇವತಿ ನಕ್ಷತ್ರದ ಪೂಜೆ: ಭೂ ವರಾಹನಾಥ ಸ್ವಾಮಿಯ ಸನ್ನಿಧಿಗೆ ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪ್ರತಿ ತಿಂಗಳು ರೇವತಿ ನಕ್ಷತ್ರದ ದಿನದಂದು ಸ್ವಾಮಿಗೆ ವಿಶೇಷ ಅಭಿಷೇಕ, ಪುಷ್ಪಾಭಿಷೇಕ, ಪಟ್ಟಾಭಿಷೇಕ ಹಾಗೂ ಶ್ರೀನಿವಾಸಕಲ್ಯಾಣ ಮಹೋತ್ಸವ ಕಾರ್ಯಕ್ರಮಗಳು ನಡೆಯುತ್ತಿವೆ. ಹಿರಣ್ಯಾಕ್ಷನನ್ನು ಕೊಂದು ಭೂದೇವಿಯನ್ನು ಸಂರಕ್ಷಿಸಿದ ನೆನಪಿಗಾಗಿ ಈ ಪೂಜೆ ನಡೆಯುತ್ತದೆ.

ಹೊಯ್ಸಳ ಮಾದರಿಯಲ್ಲಿ ದೇವಾಲಯ: ದೇವಾಲಯದ ವ್ಯವಸ್ಥಾಪನಾ ಸಮಿತಿಯ ಟ್ರಸ್ಟಿ ಶ್ರೀನಿವಾಸ ರಾಘವನ್ ಮಾತನಾಡಿ ‘ ಶ್ರೀಕ್ಷೇತ್ರದ ಶಾಸನದ ಪ್ರಕಾರ ಹೊಯ್ಸಳ ದೊರೆ ವೀರಬಲ್ಲಾಳ ಈ ದೇವಾಲಯದ ಅಭಿವೃದ್ದಿಗೆ ನೆರವು ನೀಡಿದ್ದನು. ಆದರೆ ದೇವಾಲಯ ನಿರ್ಮಿಸುವ ವೇಳೆಗೆ ಯುದ್ಧದಲ್ಲಿ ಮರಣ ಹೊಂದಿದನು. ಆದ್ದರಿಂದ ಅವನ ನೆನಪಿಗಾಗಿ ಭೂವರಹನಾಥ ದೇವಾಲಯವನ್ನು ಸಂಫೂರ್ಣವಾಗಿ ಗ್ರಾನೈಟ್ ಕಲ್ಲಿನಿಂದಲೇ ಹೊಯ್ಸಳ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!