ಉದಯವಾಹಿನಿ, ಮಂಡ್ಯ: ‘ ಲೋಕಸಭೆ ಚುನಾವಣೆಯಲ್ಲಿ ನಾನಾಗಲಿ, ನನ್ನ ಮನೆಯವರಾಗಲಿ ಅಭ್ಯರ್ಥಿ ಆಗುವುದಿಲ್ಲ. ಈಗಾಗಲೇ ಅಭ್ಯರ್ಥಿ ಯಾರೆಂದು ತೀರ್ಮಾನ ಆಗಿದ್ದು, ಘೋಷಣೆಯಷ್ಟೇ ಬಾಕಿ ಇದೆ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಮಂಗಳವಾರ ರಾತ್ರಿ ಪತ್ರಕರ್ತರ ಜೊತೆ ಅವರು ಮಾತನಾಡಿದರು.ಕಾಂಗ್ರೆಸ್ ಹೈಕಮಾಂಡ್ ಮಂತ್ರಿಗಳನ್ನು ಚುನಾವಣೆಗೆ ನಿಲ್ಲಿ ಎಂದು ಸೂಚನೆ ನೀಡಿಲ್ಲ. ನಮ್ಮ ಪಕ್ಷದ ವೇದಿಕೆಯಲ್ಲೂ ಈ ಬಗ್ಗೆ ಚರ್ಚೆ ಆಗಿಲ್ಲ. ಪ್ರತಿ ಜಿಲ್ಲಾ ಮಂತ್ರಿಗಳಿಗೂ ಎಲ್ಲರನ್ನೂ ಒಗ್ಗೂಡಿಸಿಕೊಂಡು ಅಭ್ಯರ್ಥಿ ಆಯ್ಕೆ ಮಾಡಿ ಎಂದು ಸೂಚನೆ ಇದೆ. ಗೆಲ್ಲಿಸುವ ಜವಾಬ್ದಾರಿಯನ್ನು ಸಚಿವರಿಗೆ ನೀಡಿದೆ ಅಷ್ಟೇ. ಮಂಡ್ಯ ಅಭ್ಯರ್ಥಿ ಯಾರೆಂದು ಆದಷ್ಟು ಶೀಘ್ರ ಹೇಳುತ್ತೇವೆ’ ಎಂದರು.
ಹುಬ್ಬಳ್ಳಿಯಲ್ಲಿ ಹಳೇ ಪ್ರಕರಣಕ್ಕೆ ಮರುಜೀವ ಕುರಿತು ಪ್ರತಿಕ್ರಿಯಿಸಿ ‘ ಸರ್ಕಾರ ಯಾವುದನ್ನೂ ಬೇಕು ಎಂದು ಮಾಡಿಲ್ಲ. ಹಳೇ ಪ್ರಕರಣಗಳು ಸಮಿತಿ ಮುಂದೆ ಬಂದಾಗ ಅವೇ ಓಪನ್ ಆಗುತ್ತವೆ. ಉದ್ದೇಶ ಪೂರ್ವಕವಾಗಿ ಮಾಡಬೇಕಿದ್ದರೆ ಹಿಂದೆಯೇ ಆಗುತ್ತಿತ್ತು’ ಎಂದರು.ರಾಮಮಂದಿರ ಉದ್ಘಾಟನೆಗೆ ಕರ್ನಾಟಕದ ಮುಖ್ಯಮಂತ್ರಿಗೆ ಆಹ್ವಾನ ಇಲ್ಲದಿರುವುದು ಖಂಡನೀಯ. ಕನ್ನಡ ನಾಡಿನ ಮುಖ್ಯಮಂತ್ರಿಗೆ ಆಹ್ವಾನ ಕೊಡಬೇಕಾದದ್ದು ಪ್ರಜಾಪ್ರಭುತ್ವದ ನಿಯಮ. ರಾಮಮಂದಿರ ಉದ್ಘಾಟನೆ ಮಾಡುವುದನ್ನು ನಾವು ಸ್ವಾಗತಿಸುತ್ತೇವೆ. ರಾಮ ಎಲ್ಲರ ದೇವರು. ಒಬ್ಬರಿಗೆ ಸೀಮಿತವಾದ ದೇವರಲ್ಲ. ರಾಮಮಂದಿರ ಕಟ್ಟಿರುವುದಕ್ಕೆ ಬೇಸರವಿಲ್ಲ. ಅವರಿಗಿಂತ ಹೆಚ್ಚು ಸಂತೋಷ ಪಡುತ್ತೇವೆ’ ಎಂದರು.
