ಉದಯವಾಹಿನಿ, ಬೆಂಗಳೂರು: ಒಂದು ಕಾಲದಲ್ಲಿ ಗತವೈಭವ ಮೆರೆದಿದ್ದ ಬಿಎಸ್‍ಎನ್‍ಎಲ್‍ನ ನಗರ ಕೇಂದ್ರ ಭಾಗದಲ್ಲಿರುವ ಶಾಖಾ ಕಚೇರಿಯು ಈಗ ಪಾಳುಕೊಂಪೆಯಾಗಿದೆ. ಮೊಬೈಲ್ ಸೇವೆಯ ಆರಂಭದ ದಿನಗಳಲ್ಲಿ ಬಿಎಸ್‍ಎನ್‍ಎಲ್ ಸಿಮ್ ಪಡೆದುಕೊಳ್ಳಲು ಮುಂಜಾನೆ 4ಗಂಟೆಗೆ ಎದ್ದು ಸರತಿಸಾಲಿನಲ್ಲಿ ನಿಲ್ಲಬೇಕಾಗಿತ್ತು. ಕೆಲವು ಕಡೆ ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದ ಉದಹಾರಣೆಗಳೂ ಇವೆ.
ಅಂಥ ಗತವೈಭವ ಮರೆಯಾಗಿ ಇಂದು ಬಿಎಸ್‍ಎನ್‍ಎಲ್ ಸೊರಗಿ ಹೋಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಬೆಂಗಳೂರಿನ ಹೃದಯ ಭಾಗದಲ್ಲಿರುವ ಬಿಎಸ್‍ಎನ್‍ಎಲ್‍ನ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕರ ಪ್ರಧಾನ ಕಚೇರಿ ಸಾಕ್ಷಿಯಾಗಿದೆ. ಬಿಎಸ್‍ಎನ್‍ಎಲ್‍ನ ಕಚೇರಿಗೆ ಭೇಟಿ ನೀಡುವುದಾದರೆ ಮೂಗು ಮುಚ್ಚಿಕೊಂಡೇ ಒಳಹೋಗಬೇಕು. ಎಲ್ಲೆಂದರಲ್ಲಿ ಕಸದ ರಾಶಿ, ತಿಪ್ಪೆಗುಂಡಿ, ಅಡ್ಡಾದಿಡ್ಡಿಯಾಗಿ ಬಿದ್ದಿರುವ ತ್ಯಾಜ್ಯ ವಸ್ತುಗಳು ಅಸಹನೀಯ ವಾತಾವರಣ ಸೃಷ್ಟಿಸಿವೆ.
ಎಲ್ಲೆಂದರಲ್ಲಿ ಅಗೆದು ಗುಂಡಿಗಳನ್ನು ನಿರ್ಮಿಸಲಾಗಿದೆ. ಪಾರ್ಕಿಂಗ್ ಸ್ಥಳವಂತೂ ಹಾಳು ಕೊಂಪೆಯಾಗಿದೆ. ಬಿಎಸ್‍ಎನ್‍ಎಲ್‍ನ ಕ್ಯಾಂಟೀನ್‍ನಲ್ಲಿ ತಿಂಡಿ, ಊಟಕ್ಕಾಗಿ ಜನ ಕಿಕ್ಕಿರಿದು ತುಂಬಿರುತ್ತಿದ್ದರು. ಈಗ ಇಡೀ ಕ್ಯಾಂಟೀನ್ ಬಣಗುಡುತ್ತಿದೆ. ವಾಣಿಜ್ಯ ನ್ಯಾಯಾಲಯಗಳ ಸಂಕೀರ್ಣ, ಟೆಲಿಕಾಂ ರೆಗ್ಯುಲಾರಿಟಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್) ಪ್ರಾದೇಶಿಕ ಕಚೇರಿಗಳು ಬಿಎಸ್‍ಎನ್‍ಎಲ್‍ನ ಕೇಂದ್ರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿವೆ. ವಾಣಿಜ್ಯ ನ್ಯಾಯಾಲಯಗಳ ಪ್ರಕರಣಗಳಿಗಾಗಿ ಆಗಮಿಸುವವರು ಬಿಎಸ್‍ಎನ್‍ಎಲ್‍ನ ದುಸ್ಥಿತಿ ಕಂಡು ಮರುಗುವಂತಾಗಿದೆ.
