ಉದಯವಾಹಿನಿ, ಬೆಂಗಳೂರು: ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಧಾರ್ಮಿಕ ಕಾರ್ಯಕ್ರಮವಲ್ಲ. ರಾಜಕೀಯಪ್ರೇರಿತ ಕಾರ್ಯಕ್ರಮ. ಧಾರ್ಮಿಕ ಗುರುಗಳಿಂದ ರಾಮನ ಪ್ರತಿಷ್ಠಾಪನೆಯಾಗುತ್ತಿದ್ದರೆ ನಾವು ಸ್ವಯಂಪ್ರೇರಿತವಾಗಿ ಭಾಗವಹಿಸುತ್ತಿದ್ದೆವು ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೇಳುತ್ತಿರುವುದು ಸಂಪೂರ್ಣ ವೈಯಕ್ತಿಕ ಅಭಿಪ್ರಾಯ. ಇದಕ್ಕೂ , ಪಕ್ಷಕ್ಕೂ ಸಂಬಂಧವಿಲ್ಲ ಎಂದು ಆರಂಭದಲ್ಲೇ ಸ್ಪಷ್ಟಪಡಿಸಿದರು. ನಮಗೆ ತಿಳಿದ ಮಟ್ಟಿಗೆ ರಾಮನ ಪೂಜೆ ಎಂದರೆ ಕೋಸಂಬರಿ ಮತ್ತು ಪಾನಕದ ನೆನಪುಗಳಿವೆ. ಆದರೆ ಈಗ ನಡೆಯುತ್ತಿರುವ ಆಡಂಬರ ಏಕೆ ಎಂದು ಪ್ರಶ್ನಿಸಿದರು.
ಹಿಂದೂ ಧರ್ಮದ ಧಾರ್ಮಿಕ ಗುರು ಶಂಕರಾಚಾರ್ಯರು. ಅಂತಹ ಯಾವುದೇ ಧಾರ್ಮಿಕ ಗುರುಗಳಿಂದ ರಾಮನ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದ್ದರೆ ಆಹ್ವಾನ ಇಲ್ಲದೆ ನಾವು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಿತ್ತು. ಆದರೆ ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹಸಚಿವ ಅಮಿತ್ ಷಾ ಅವರಿಂದ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದೆ. ಅವರು ಧಾರ್ಮಿಕ ಗುರುಗಳಲ್ಲ. ರಾಜಕೀಯ ನಾಯಕರು. ಮೊದಲಾಗಿ ವಿಶ್ವಗುರು ಮತ್ತು ಅಮಿತ್ ಷಾ ಅವರ ಧರ್ಮ ಯಾವುದು ಎಂಬುದೇ ಸ್ಪಷ್ಟವಾಗಿಲ್ಲ ಎಂದರು.
