ಉದಯವಾಹಿನಿ, ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಕಾಣಿಸಿಕೊಂಡಿರುವ ಹಿನ್ನೆಲೆ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಕೆಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲೂ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಇರಲಿದೆ ಎಂದು ಮೂಲಗಳು ಹೇಳಿವೆ.
ವಾಯುಭಾರ ಕುಸಿತದಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.ಅದರಲ್ಲೂ ಕರಾವಳಿಯಲ್ಲಿ ದಿಢೀರ್ ವರುಣನ ಆಗಮನವಾಗಿದ್ದು, ಕಾರವಾರದಲ್ಲಿ ಬೆಳಗ್ಗೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.
ಕಳೆದ ಒಂದು ಗಂಟೆಯಿಂದ ಮಳೆ ಅಬ್ಬರಿಸಿದ್ದು, ಏಕಾಏಕಿ ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.ಮಳೆ ಸುರಿಯುತ್ತಿರುವ ಹಿನ್ನೆಲೆ ನಗರದ ರಸ್ತೆಗಳು ಖಾಲಿಖಾಲಿಯಾಗಿವೆ. ಬಿಸಿಲಿಗೆ ಕಾದಿದ್ದ ಇಳೆಗೆ ವರುಣ ತಂಪೆರೆದಿದ್ದು, ಶಾಲೆ, ಕೆಲಸಕ್ಕೆ ತೆರಳುವವರಿಗೆ ಮಳೆರಾಯ ಅಡಿಪಡಿಸಿದ್ದಾನೆ. ಕಾರವಾರ, ಅಂಕೋಲ, ಕುಮಟಾ ಸೇರಿ ಹಲವು ತಾಲೂಕುಗಳಲ್ಲಿ ಮಳೆ ಸುರಿಯುತ್ತಿದೆ. ಬುಧವಾರದಿಂದ ಹಲವು ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಲವು ಕಡೆ ಮಳೆಯ ಸಿಂಚನವಾಗಿದೆ.
