ಉದಯವಾಹಿನಿ, ಬೆಂಗಳೂರು:  ರಾಜ್ಯದ ಗುತ್ತಿಗೆದಾರರ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಕೇಳಿದರೆ ಅದನ್ನು ಒದಗಿಸಲು ಯಾವುದೇ ಅಡಚಣೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಸರ್ಕಾರದ ದಾಖಲೆ. ಮುಚ್ಚಿಡುವ ಅಗತ್ಯವಿಲ್ಲ. 10 ರೂ. ಪಾವತಿಸಿ ಆರ್‍ಟಿಐ ಅರ್ಜಿ ಹಾಕಿದರೆ ದಾಖಲೆ ಕೊಡುತ್ತೇವೆ. ಇನ್ನು ಆದಾಯ ತೆರಿಗೆ ಸರ್ಕಾರಿ ಸಂಸ್ಥೆ ಕೇಳಿದರೆ ಕೊಡಲ್ಲ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಆದಾಯ ತೆರಿಗೆ ಇಲಾಖೆ 6 ಬಾರಿ ಪತ್ರ ಬರೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಇದು ಸಚಿವರ ಅಥವಾ ಸರ್ಕಾರದವರೆಗೂ ಬರುವ ವಿಚಾರವಲ್ಲ. ಅಧಿಕಾರಿಗಳು ನಿರ್ಧಾರ ತೆಗೆದುಕೊಂಡು ಮಾಹಿತಿ ಒದಗಿಸುತ್ತಾರೆ ಎಂದರು. ಇತ್ತೀಚೆಗೆ ತಾವು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಟ್ಕರಿ ಅವರನ್ನು ಭೇಟಿ ಮಾಡಿದ್ದು, ರಾಜ್ಯದಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 20 ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವ ಸಂಬಂಧ ಪಟ್ಟಂತೆ ಚರ್ಚೆ ನಡೆಸಿದ್ದೇವೆ. ಭೂ ಸ್ವಾೀಧಿನ, ಅರಣ್ಯ ಪ್ರದೇಶದ ಪೂರ್ವಾನುಮತಿ, ನಿರಪೇಕ್ಷಣಾ ಪತ್ರ ಸೇರಿದಂತೆ ಹಲವು ರೀತಿಯ ತೊಡಕುಗಳು ಬಾಕಿ ಉಳಿದಿವೆ. ಅವುಗಳನ್ನು 3 ತಿಂಗಳಲ್ಲಿ ಬಗೆಹರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವುದಾಗಿ ಸತೀಶ್ ಜಾರಕಿಹೊಳಿ ತಿಳಿಸಿದರು. ಬೆಂಗಳೂರು ನಗರದಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಆಸಕ್ತಿ ಹೊಂದಿದೆ. ರಾಜ್ಯಸರ್ಕಾರ ನಿರಪೇಕ್ಷಣಾ ಪತ್ರ ನೀಡಿದ್ದೇ ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಸುರಂಗ ನಿರ್ಮಾಣಕ್ಕೆ ಮುಂದಾಗಲಿದೆ. ಆದರೆ ಯಾರಿಂದ ಕಾಮಗಾರಿ ನಡೆಸಬೇಕೆಂಬುದು ನಿರ್ಣಯವಾಗಿಲ್ಲ. ಸದ್ಯಕ್ಕೆ ಬಿಬಿಎಂಪಿ ಅದರ ಮೇಲುಸ್ತುವಾರಿಯನ್ನು ವಹಿಸುತ್ತಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!