ಉದಯವಾಹಿನಿ, ಬೆಂಗಳೂರು : ರಾಮಜನ್ಮ ಭೂಮಿಗಾಗಿ ಹೋರಾಟ ನಡೆಸಿದ ಕರಸೇವಕ ಶ್ರೀಕಾಂತ್ ಕುಲಕರ್ಣಿ ಬಂಧನದ ವಿರುದ್ದ ಬೀದಿಗಿಳಿದು ಹೋರಾಟ ನಡೆಸಿದ್ದ ಪ್ರತಿಪಕ್ಷ ಬಿಜೆಪಿ ಇದೀಗ ಅಯೋಧ್ಯೆ ರಾಮಮಂದಿರದ ಕರಸೇವಕ ನಾನು. ನನ್ನನ್ನೂ ಬಂಧಿಸಿ ಎಂಬ ಅಭಿಯಾನವನ್ನು ನಡೆಸುವ ಮೂಲಕ ಸರ್ಕಾರದ ವಿರುದ್ದ ಮತ್ತೊಂದು ಸುತ್ತಿನ ಸಮರಕ್ಕೆ ಸಜ್ಜಾಗಿದೆ. ಮಾಜಿ ಶಾಸಕರು ಸೇರಿದಂತೆ ರಾಜ್ಯದ ನಾನಾ ಕಡೆ ರಾಮಜನ್ಮ ಭೂಮಿಗಾಗಿ ಅಂದು ಹೋರಾಟ ನಡೆಸಿದ ಕರಸೇವಕರು ಕೈಯಲ್ಲಿ ಬ್ಯಾನರ್ ಹಿಡಿದುಕೊಂಡು ನನ್ನನ್ನು ಬಂಸಿ ಸಿದ್ದರಾಮಯ್ಯ ಎಂಬ ಅಭಿಯಾನವನ್ನು ನಡೆಸಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಶಾಸಕ ವಿ.ಸುನಿಲ್ ಕುಮಾರ್ ಸದಾಶಿವನಗರ ಪೊಲೀಸ್ ಠಾಣೆ ಮುಂಭಾಗ ಏಕಾಂಗಿಯಾಗಿ ನನ್ನನ್ನು ಬಂಧಿಸಿ ಎಂದು ಪ್ರತಿಭಟನೆ ನಡೆಸಿದರೆ, ಅತ್ತ ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಸಿ.ಟಿ.ರವಿ ಅವರು ನಗರದ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.
ಈ ಮೂಲಕ ರಾಜ್ಯದ್ಯಾಂತ ಬರುವ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಮುಂದಾಗಿದ್ದು, ಹಂತ ಹಂತವಾಗಿ ಒಬ್ಬೊಬ್ಬರೇ ಪೊಲೀಸ್ ಠಾಣೆಗಳ ಮುಂದೆ ನಾನು ಕರಸೇವಕ, ನನ್ನನ್ನು ಬಂಧಿಸಬೇಕು ಎಂದು ಒತ್ತಾಯ ಮಾಡಲಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನಕ್ಕೆ ಚಾಲನೆ ದೊರಕಿದ್ದು, ಆಡಳಿತರೂಢ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗಳನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ನಡೆಸಲಿದೆ. ರಾಮ ಮಂದಿರದ ಕರಸೇವಕ ನಾನು. ನನ್ನನ್ನು ಬಂಧಿಸಿ ಎಂದು ಧರಣಿ ನಡೆಸಿದರು. ಠಾಣೆಯ ಮುಂದೆ ಪ್ರತಿಭಟನೆಗೆ ಅವಕಾಶ ಇಲ್ಲದ ಕಾರಣ ಸುನಿಲ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
