ಕಲಬುರಗಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಬೆಂಗಳೂರು ಮತ್ತು ಕಲಬುರಗಿಯ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಜಿಲ್ಲಾ ಘಟಕದ ಅಧ್ಯಕ್ಷ ಏಜಾಜ್ ಅಲಿ ಮತ್ತು ಖಜಾಂಚಿ ಶಾಹೀದ್ ನಾಸೀರ್ ಅವರ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ಮಾಡಿ, ವಶಕ್ಕೆ ಪಡೆದ ಬಳಿಕ ಮೆಹಬೂಬ್ ನಗರ ಪ್ರದೇಶದಲ್ಲಿ ಬಿಗುವಿನ ವಾತಾವರಣ ಕಂಡುಬಂತು.ಇಬ್ಬರ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿಕೊಂಡು ಬಂದಿದ್ದ ಎನ್‌ಐಎ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಭದ್ರತಾ ಸಿಬ್ಬಂದಿಯನ್ನು ಕರೆತಂದರು. ಮಧ್ಯರಾತ್ರಿ 2.30ಕ್ಕೆ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಪಡೆ ತುಕಡಿಯನ್ನು ಪೊಲೀಸ್ ಆಯುಕ್ತರ ಕಚೇರಿಗೆ ಕರೆಸಿಕೊಳ್ಳಲಾಯಿತು. ಅಲ್ಲಿಂದ ಸುಮಾರು 3 ಗಂಟೆಗೆ ಏಜಾಜ್ ಮನೆ ಸಮೀಪದ ರಿಂಗ್ ರಸ್ತೆಯಲ್ಲಿ ಕೆಎಸ್‌ಆರ್‌ಪಿ ತುಕಡಿ, ಸ್ಥಳೀಯ ಪೊಲೀಸರು ಭದ್ರತೆಗೆ ನಿಯೋಜನೆಗೊಂಡರು ಎಂಬುದು ತಿಳಿದುಬಂತು.ಇದಾದ 30 ನಿಮಿಷದ ಬಳಿಕ 3.30ರ ವೇಳೆಗೆ ಎನ್‌ಐಎ, ಬೆಂಗಳೂರು ಪೊಲೀಸ್ ಅಧಿಕಾರಿಗಳಿದ್ದ ಸುಮಾರು 6 ಜನರ ತಂಡ ಏಜಾಜ್ ಮನೆ ಪ್ರವೇಶಿಸಿತು. ನಗರ ಪೊಲೀಸರು ಭದ್ರತೆಗಾಗಿ ಮನೆಯ ಸುತ್ತ ಕಾವಲಲ್ಲಿ ನಿಂತರು.ನಿವಾಸದ ಸಮೀಪವೇ ಇದ್ದ ಕಚೇರಿಯಲ್ಲಿ ಸಾಕಷ್ಟು ಶೋಧ ಕಾರ್ಯ ನಡೆಸಿ, ಏಜಾಜ್ ಮತ್ತು ಕುಟುಂಬಸ್ಥರನ್ನು ವಿಚಾರಣೆ ಮಾಡಿದರು. ಬೆಳಿಗ್ಗೆ 7.30ರ ಸುಮಾರಿಗೆ ಮನೆಯಿಂದ ಹೊರ ಬಂದ, ಕೆಲ ಸಮಯದ ಬಳಿಕ ಮತ್ತೆ ಮನೆ ಪ್ರವೇಶಿಸಿದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.6 ಗಂಟೆಗಳ ಕಾಲ ಶೋಧ ಕಾರ್ಯ ಮಾಡಿ, ವಿಚಾರಣೆ ಬಳಿಕ ಬೆಳಿಗ್ಗೆ 9.30ರ ಸುಮಾರಿಗೆ ಏಜಾಜ್ ಅವರನ್ನು ವಶಕ್ಕೆ ಪಡೆದು ತಮ್ಮೊಂದಿಗೆ ಕರೆದೊಯ್ದರು. ಈ ವೇಳೆಗೆ ಪಿಎಫ್‌ಐ ಸಂಘಟನೆಯ ನೂರಾರು ಕಾರ್ಯಕರ್ತರು ಮನೆಯ ಸುತ್ತಲಿನ ಪ್ರದೇಶದಲ್ಲಿ ಜಮಾಯಿಸಿದರು. ಏಜಾಜ್ ವಶಕ್ಕೆ ಪಡೆಯುವುದನ್ನು ಖಂಡಿಸಿ, ಪ್ರತಿಭಟನೆ ನಡೆಸಿದರು.ಕೋವಿಡ್ ಸಾಂಕ್ರಾಮಿಕ ವೇಳೆ ಪ್ರತಿಭಟನೆ ನಡೆಸಿದ ಕೆಲ ದೂರುಗಳನ್ನು ಹೊರತುಪಡಿಸಿದರೆ ಏಜಾಜ್ ವಿರುದ್ಧ ಗಂಭೀರ ಪ್ರಕರಣಗಳು ಇಲ್ಲ. ನಗರದಲ್ಲಿ ಸಣ್ಣ ಮಳಿಗೆ ಇಟ್ಟು ವ್ಯಾಪಾರ ನಡೆಸುತ್ತಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.