ಮೈಸೂರು: ‘ಜನರಿಗೆ ಗುರಿಯನ್ನು ತೋರಿಸುವ ಕೆಲಸವನ್ನು ಮಾಡದೇ ತಲುಪುವುದಕ್ಕೆ ಏಣಿಯನ್ನೂ ಒದಗಿಸಬೇಕು’ ಎಂದು ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ಕಳಸ್ತವಾಡಿಯ ಸಂಕಲ್ಪ ಸೌಧದ ಸಭಾಂಗಣದಲ್ಲಿ ಬುಧವಾರ ನಡೆದ 1,10,001ನೇ ಸ್ವ–ಸಹಾಯ ಸಂಘದ ಉದ್ಘಾಟನೆ ಹಾಗೂ ಕಾರ್ಯಕರ್ತರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.‘ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಆಲಸ್ಯ ತೋರಿಸಿದರೆ ನಾವು ಜನರನ್ನು ಸೌಲಭ್ಯದಿಂದ ವಂಚಿರಾಗಿಸಿದಂತಾಗುತ್ತದೆ. ಪ್ರತಿ ಕಾರ್ಯಕರ್ತನೂ ಶ್ರದ್ಧೆಯಿಂದ, ಆತ್ಮವಂಚನೆ ಇಲ್ಲದೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.
‘ಮೈಸೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ 1.10 ಲಕ್ಷ ಸ್ವ ಸಹಾಯ ಸಂಘಗಳು, 11.6 ಲಕ್ಷ ಮಂದಿ ಸದಸ್ಯರಿದ್ದಾರೆ. ಮೂಲ ಸೌಕರ್ಯ, ಕೃಷಿ– ಕೃಷಿಯೇತರ ಚಟುವಟಿಕೆಗಳಿಗೆ ಬ್ಯಾಂಕ್ ಮೂಲಕ ಪ್ರಗತಿನಿಧಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಪ್ರಸ್ತುತ ₹3ಸಾವಿರ ಕೋಟಿ ಹೊರ ಬಾಕಿ ಚಾಲ್ತಿ ಸಾಲವಿದ್ದು, ಸಂಘಗಳಿಂದ ಶೇ 100ರಷ್ಟು ಮರುಪಾವತಿ ಆಗುತ್ತಿದೆ. ಸಂಘದಿಂದ ಸಾಲ–ಸೌಲಭ್ಯಗಳನ್ನು ಪಡೆದ ಸದಸ್ಯರಿಗೆ ಆಪತ್ಕಾಲದಲ್ಲಿ ಸಹಕಾರಿ ಆಗುವಂತೆ ಪ್ರಗತಿ ರಕ್ಷಾ ಕವಚ ಕಾರ್ಯಕ್ರಮದಲ್ಲಿ ವಿಮಾ ಕಂಪನಿಗಳ ಮೂಲಕ ವಿಮಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ’ ಎಂದು ವಿವರಿಸಿದರು.ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಮ್ಮೂರು ನಮ್ಮ ಕೆರೆ, ರುದ್ರ ಭೂವಿ ಅಭಿವೃದ್ಧಿ, ಶುದ್ಧಗಂಗಾ ಕುಡಿಯುವ ನೀರಿನ ಘಟಕ, ಜ್ಞಾನದೀಪ ಶಾಲಾ ಶಿಕ್ಷಣ, ನಿರ್ಗತಿಕರಿಗೆ ಮಸಾಶನ, ಜನಮಂಗಲ, ವಾತ್ಸಲ್ಯ, ಮಹಿಳಾ ಸಬಲೀಕರಣ ಜ್ಞಾನವಿಕಾಸ, ಶೌರ್ಯ ವಿಪತ್ತು ನಿರ್ವಹಣಾ, ಜನಜಾಗೃತಿ, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗಾಗಿ ಧರ್ಮೋತ್ಥಾನ ಟ್ರಸ್ಟ್, ಭಜನಾ ಪರಿಶತ್, ಭಜನ ಕಮ್ಮಟ, ರೈತ ಸೇವಾ ಕೇಂದ್ರ, ಹಸಿರು ಇಂಧನ ಕಾರ್ಯಕ್ರಮ, ಶಿಷ್ಯ ವೇತನ ಹಾಗೂ ಸಿ.ಎಸ್.ಸಿ. ಕಾರ್ಯಕ್ರಮಗಳನ್ನು ಗ್ರಾಮೀಣ ಜನರಿಗೆ ತಲುಪಿಸಬೇಕು’ ಎಂದರು.

Leave a Reply

Your email address will not be published. Required fields are marked *

error: Content is protected !!