ಉದಯವಾಹಿನಿ, ಬೆಂಗಳೂರು: ಬಿಎಂಟಿಸಿ ಬಸ್ ಮೇಲೆ ಇದ್ದ ಜಾಹೀರಾತು ಪ್ರದರ್ಶನವೊಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದೆ. ತ್ವರಿತವಾಗಿ ರಸಂ ಮಾಡಲು ಅನುಕೂಲವಾಗುವಂತೆ ಕಂಪನಿಯೊಂದರ ರಸಂ ಪೇಸ್ಟ್ ನ ಜಾಹೀರಾತನ್ನ ಬಸ್ ಮೇಲೆ ಹಾಕಲಾಗಿತ್ತು. ‘ವೈಫ್ ನಾರ್ತ್ ಇಂಡಿಯನ್ನಾ?’ ಎಂಬ ಪದಗುಚ್ಛದೊಂದಿಗೆ ವ್ಯಕ್ತಿಯ ಗೊಂದಲಮಯ ನೋಟವನ್ನು ಹೊಂದಿರುವ ಜಾಹೀರಾತು ಪ್ರದರ್ಶಿಸಲಾಗಿತ್ತು.
ರಸಂ ಪೇಸ್ಟ್ ಸಾಂಪ್ರದಾಯಿಕ ದಕ್ಷಿಣ ಭಾರತೀಯ ರಸಂ ತಯಾರಿಸಲು ತ್ವರಿತ ಪರಿಹಾರವನ್ನು ಸೂಚಿಸುತ್ತದೆ ಎಂಬ ಅರ್ಥದಲ್ಲಿ ಜಾಹೀರಾತಲ್ಲಿ ಹೇಳಲಾಗಿತ್ತು. ಇದನ್ನು ವಿವಾದಾತ್ಮಕ ಜಾಹೀರಾತು ಎಂದು ಕರೆದ ಟ್ವಿಟರ್ ಬಳಕೆದಾರ ತೇಜಸ್ ದಿನಕರ್ ಎಂಬುವವರು ಜಾಹೀರಾತಿನ ಫೋಟೋವನ್ನ ತಮ್ಮ ಖಾತೆಯಲ್ಲಿ ಹಂಚಿಕೊಂಡು ಇತರರ ಗಮನಕ್ಕೆ ತಂದಿದ್ದಾರೆ. ಅವರು ತಮ್ಮ ಟೀಕೆಯಲ್ಲಿ ಜಾಹೀರಾತನ್ನು ಉತ್ತರ ಮತ್ತು ದಕ್ಷಿಣ ಭಾರತದ ವ್ಯಕ್ತಿಗಳಿಗೆ ಮಾಡುವ ‘ಅವಮಾನ’ ಎಂದು ಖಂಡಿಸಿದ್ದಾರೆ.
ಚಿತ್ರವನ್ನು ಗುರುವಾರ ಪೋಸ್ಟ್ ಮಾಡಲಾಗಿದ್ದು 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು ಆನ್‌ಲೈನ್‌ನಲ್ಲಿ ಚರ್ಚೆಯನ್ನೂ ಹುಟ್ಟುಹಾಕಿದೆ. ಕೆಲವರು ದಿನಕರ್ ಅವರ ಭಾವನೆಯನ್ನು ಬೆಂಬಲಿಸಿದ್ದು ಜಾಹೀರಾತು ಆಕ್ರಮಣಕಾರಿ ಎಂದು ಪರಿಗಣಿಸಿದರೆ, ಇತರರು ಎರಡು ಪ್ರದೇಶಗಳ ನಡುವೆ ವೈವಾಹಿಕ ಬಂಧಗಳನ್ನು ಉತ್ತೇಜಿಸುವ ಮೂಲಕ ಏಕತೆಯನ್ನು ಬೆಳೆಸಬಹುದು ಎಂದು ಜಾಹೀರಾತಿನ ಪರ ಅಭಿಪ್ರಾಯ ಪ್ರಸ್ತಾಪಿಸಿದ್ದಾರೆ.
