
ಉದಯವಾಹಿನಿ, ಬೆಂಗಳೂರು : ಬರದ ನಡುವೆಯೂ ರಾಜ್ಯದ ಜನ ಮೂರೊತ್ತಿನ ಊಟ ಮಾಡ್ತಿದ್ದಾರೆ ಅಂದ್ರೆ ಅದಕ್ಕೆ ನಮ್ಮ ಸರ್ಕಾರದ ಯೋಜನೆಗಳೇ ಕಾರಣ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ವಿಪಕ್ಷ ನಾಯಕ ಅಶೋಕ್, ರಾಜ್ಯ ಸರ್ಕಾರ ಜನರಿಗೆ ಗುಳೆ ಗ್ಯಾರಂಟಿ ಕೊಟ್ಟಿದೆ ಎಂದು ಹೇಳಿರುವುದಕ್ಕೆ ನಾಚಿಕೆಪಡಬೇಕು.
ಇಂತಹ ಭೀಕರ ಬರದ ನಡುವೆಯೂ ರಾಜ್ಯದ ಜನ ಮೂರೊತ್ತಿನ ಊಟ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ನಮ್ಮ ಸರ್ಕಾರದ ಯೋಜನೆಗಳೇ ಕಾರಣ ಹೊರತು, ಇವರು ಕುರುಡಾಗಿ ಆರಾಧಿಸುವ ಮೋದಿಯವರಲ್ಲ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಬರದಿಂದ ತತ್ತರಿಸುವ ರೈತರಿಗೆ 2 ಸಾವಿರ ಪರಿಹಾರ ನೀಡುವ ಕೆಲಸ ಮಾಡುತ್ತಿದೆ. ರೈತರ ನೆರವಿಗಾಗಿ ಕೃಷಿ ಭಾಗ್ಯ ಜಾರಿಗೆ ತಂದಿದೆ. ಕೇಂದ್ರ ಸರ್ಕಾರದಿಂದ ರಾಜ್ಯದ ರೈತರಿಗೆ ಏನು ನೆರವು ಸಿಕ್ಕಿದೆ ಎಂದು ಹೇಳುವ ಧಮ್ ಅಶೋಕ್ರವರಿಗಿದೆಯೇ.? ಎಂದು ಪ್ರಶ್ನಿಸಿದ್ದಾರೆ.
ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದು ಅಶೋಕ್ ಹೇಳಿದ್ದಾರೆ. ವಿಪಕ್ಷ ನಾಯಕರಾದ ಅಶೋಕ್ರವರಿಗೆ ರಾಜ್ಯದ ಹಿತಾಸಕ್ತಿ ಕಾಪಾಡುವುದು ಮುಖ್ಯವೋ.? ಅಥವಾ ಕೇಂದ್ರದ ನಾಯಕರ ಕೃಪಕಟಾಕ್ಷಕ್ಕೆ ಪಾತ್ರರಾಗುವುದು ಮುಖ್ಯವೋ.? ನಿಮಗೆ ರಾಜ್ಯದ ರೈತರಿಗಿಂತ, ನಿಮ್ಮ ಕೇಂದ್ರ ನಾಯಕರ ಮರ್ಜಿ ಕಾಯುವುದು ಮುಖ್ಯ ಎಂದಾದರೆ, ನೀವು ವಿಪಕ್ಷ ಸ್ಥಾನ ಅಲಂಕರಿಸಿರುವುದು ಈ ನಾಡಿನ ದುರಂತ ಎಂದೇ ಭಾವಿಸಬೇಕಾಗುತ್ತದೆ.
