
ಉದಯವಾಹಿನಿ, ಬೆಂಗಳೂರು: ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಸಮುದಾಯದ ೯೨ ಸಾವಿರ ಜನರ ಪಡೆದಿರುವ ೭೮ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ ಮನ್ನಾ ಮಾಡಬೇಕೆಂದು ವಿಧಾನ ಪರಿಷತ್ತಿನ ಸದಸ್ಯರೂ ಆದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಶಾಸಕ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ೨೦೧೪ರಿಂದ ೨೦೨೦ರವರೆಗೂ ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ೯೨ ಸಾವಿರ ಜನ ಸಾಲ ತೆಗೆದುಕೊಂಡು ಕೋವಿಡ್ ಸಂಕಷ್ಟಕ್ಕೆ ಗುರಿಯಾದರು. ಆನಂತರ, ಸರ್ಕಾರದ ಯಾವುದೇ ಯೋಜನೆ ಅಥವಾ ಆರ್ಥಿಕ ಸಹಾಯವಿಲ್ಲದೇ, ಉದ್ಯೋಗವಿಲ್ಲದೇ, ಸಾಲ ತೀರಿಸಲಾಗದೇ ಬರಿ ಬಡ್ಡಿ ಕಟ್ಟುವುದರಲ್ಲಿ ಕಷ್ಟಪಡುತ್ತಿರುವ ೯೨ ಸಾವಿರ ಜನರ ಬಡ್ಡಿ ಮತ್ತು ಅಸಲು ಸೇರಿ ೭೮ ಕೋಟಿ ರೂ.ಗಳನ್ನು ಸರ್ಕಾರ ಮನ್ನಾ ಮಾಡಬೇಕೆಂದು ಮನವಿ ಮಾಡಿದರು.
ವಿಶ್ವಕರ್ಮ ಮಹಾಸಭಾವು ಕಳೆದ ೨೫ ವರ್ಷಗಳಿಂದ ವಿಶ್ವಕರ್ಮ ಸಮಾಜದಲ್ಲಿರುವ ಐದು ಕಸುಬುಗಳನ್ನು ಉಳಿಸಿ, ಸಮಾಜಕ್ಕೆ ಸಲ್ಲಬೇಕಾದ ಗೌರವ ಹಾಗೂ ಸರ್ಕಾರದ ಸವಲತ್ತುಗಳು ಕೊಡಿಸುವಲ್ಲಿ ಹೋರಾಟ ನಡೆಸಲಾಗುತ್ತಿದೆ.
ಈ ಹೋರಾಟ ಹಾಗೂ ಸಂಘಟನೆಯಿಂದ ವಿಶ್ವಕರ್ಮ ಜಯಂತಿ, ಅಮರಶಿಲ್ಪಿ ಜಕಣಾಚಾರಿ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಪರಿಶಿಷ್ಟ ಪಂಗಡಕ್ಕೆ ಸಮಾಜವನ್ನು ಸೇರಿಸಬೇಕೆಂದು ಕುಲಶಾಸ್ತ್ರ ಅಧ್ಯಯನ ನಡೆಸಲು ಸರ್ಕಾರದಿಂದ ಆದೇಶಿಸಿಕೊಂಡು ಈಗ ರಾಜ್ಯಾದ್ಯಂತ ಕುಲಶಾಸ್ತ್ರ ಅಧ್ಯಯನ ನಡೆಸಲಾಗುತ್ತಿದೆ.
