ಉದಯವಾಹಿನಿ, ಹಾಸನ: ಪ್ರೀತಿಸುವಂತೆ ನಿರಂತರ ಕಿರುಕುಳ ನೀಡಿ ಸಾರ್ವಜನಿಕರ ಮುಂದೆಯೇ ಯುವಕನೊಬ್ಬ ಮಾಡಿದ ಅವಮಾನದಿಂದ ಮನನೊಂದು ಯುವತಿ ನೇಣಿಗೆ ಶರಣಾದ ದಾರುಣ ಘಟನೆ ಬೇಲೂರಿನ ನಿಡಗೂಡು ಗ್ರಾಮದಲ್ಲಿ ನಡೆದಿದೆ.
ನಿಡಗೂಡು ಗ್ರಾಮದ ಜಯಣ್ಣ ಅವರ ಪುತ್ರಿ ಸಂಗೀತಾ (೨೧) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಅದೇ ಗ್ರಾಮದ ಹೊನ್ನಯ್ಯನ ಪುತ್ರ ಶಿವು ಎಂಬಾತ ಸಂಗೀತಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡು ಓಡಾಡುತ್ತಾ, ತನಗೆ ಆಕೆಯನ್ನು ಮದುವೆ ಮಾಡಿಕೊಡುವಂತೆ ಸಂಗೀತಾ ಪೋಷಕರಲ್ಲಿ ಕೇಳಿದ್ದ. ಇದಕ್ಕೆ ಸಂಗೀತಾ ಮನೆಯವರು ಈಗಲೇ ಮದುವೆ ಮಾಡುವುದಿಲ್ಲ ಎಂದು ತಿಳಿಸಿದ್ದರು. ಇಷ್ಟಾದರೂ ಶಿವು, ಸಂಗೀತಾಳಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ.
ಕಳೆದ ಜ.೧೧ ರಂದು ಬೇಲೂರಿನ ಅಯ್ಯಪ್ಪಸ್ವಾಮಿ ದೆವಸ್ಥಾನಕ್ಕೆ ಸಂಗೀತಾ ಹೋಗಿದ್ದಳು. ಈ ವೇಳೆ ಅಲ್ಲಿಗೆ ಬಂದ ಶಿವು, ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಾನು ಫೋನ್ ಮಾಡಿದರೂ ಏಕೆ ರಿಸೀವ್ ಮಾಡುವುದಿಲ್ಲ ಎಂದು ತಲೆಗೆ ಹೊಡೆದಿದ್ದಾನೆ. ನಂತರ ನನ್ನನ್ನು ಪ್ರೀತಿ ಮಾಡುವುದಿಲ್ಲವೆಂದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಸಿ, ಫೋನ್ ಮಾಡಿದಾಗ ರಿಸೀವ್ ಮಾಡಬೇಕೆಂದು ಎಚ್ಚರಿಕೆ ಕೊಟ್ಟಿದ್ದಾನೆ. ನನ್ನನ್ನು ಮದುವೆಯಾಗಲಿಲ್ಲ ಎಂದರೆ ನೀನು ಸತ್ತುಹೋಗು ಎಂದು ಜನರ ಎದುರೇ ಅವಮಾನ ಮಾಡಿ ಹೋಗಿದ್ದ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಇದೇ ನೋವಿನಿಂದ ಗ್ರಾಮಕ್ಕೆ ಬಂದ ಸಂಗೀತಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
