ಉದಯವಾಹಿನಿ, ಬೆಂಗಳೂರು: ಹಾವೇರಿ ಜಿಲ್ಲೆ ಹಾನಗಲ್‍ನ ಖಾಸಗಿ ಹೋಟೆಲ್‍ನಲ್ಲಿ ಯುವತಿಯೊಬ್ಬಳ ಮೇಲೆ ನಡೆಸಿರುವ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ವಿಶೇಷ ಪೊಲೀಸ್ ತಂಡ(ಎಸ್‍ಐಟಿ) ವಹಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪ್ರಕರಣ ನಡೆದು ಮೂರು ದಿನಗಳಾದರೂ ಆರೋಪಿಗಳ ವಿರುದ್ಧ ಪೊಲೀಸರು ಏಕೆ ಎಫ್‍ಐಆರ್ ದಾಖಲಿಸಿಲ್ಲ. ಸ್ವತಃ ಯುವತಿಯೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದರೂ ಅವರ ವಿರುದ್ಧ ಕ್ರಮ ಏಕೆ ಜರುಗಿಸಿಲ್ಲ ಎಂದು ಪ್ರಶ್ನೆ ಮಾಡಿದರು. ಆರೋಪಿಗಳು ಅಲ್ಪಸಂಖ್ಯಾತರು ಎಂಬ ಕಾರಣಕ್ಕಾಗಿ ಅವರ ವಿರುದ್ಧ ದೂರು ದಾಖಲಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಮೊದಲು ಪೊಲೀಸರು ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಪ್ರಕರಣಕ್ಕೆ ತಿಪ್ಪೆ ಸಾರಿಸುವ ಕೆಲಸ ಮಾಡಲು ಮುಂದಾಗಿದ್ದರು.
ಈಗ ಸಂತ್ರಸ್ತೆ ಮಹಿಳೆಯೇ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ವಿಡಿಯೋ ಕಾಲ್ ಮಾಡಿ ಹೇಳಲಾಗಿದೆ. ಪ್ರಕರಣವನ್ನು ಸರಿಯಾಗಿ ನಿರ್ವಹಿಸದ ಪೊಲೀಸರನ್ನು ಅಮಾನತುಪಡಿಸಬೇಕು. ನಿಷ್ಪಾಕ್ಷಪಾತ ತನಿಖೆಯಾಗಬೇಕೆಂದರೆ ಎಸ್‍ಐಟಿಗೆ ವಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ನಾವು ಏನು ಮಾಡಿದರೂ ನಡೆಯುತ್ತದೆ ಎಂಬ ಅಹಂನಲ್ಲಿ ಯುವಕರು ಈ ಕೃತ್ಯವನ್ನು ಎಸಗಿದ್ದಾರೆ. ಕೆಲವು ವರ್ಗಗಳು ನಮ್ಮನ್ನು ಯಾರು ಮುಟ್ಟುವ ಧೈರ್ಯ ಮಾಡುವುದಿಲ್ಲ ಎಂಬ ಭ್ರಮೆಯಲ್ಲಿದ್ದಾರೆ. ಪೊಲೀಸರ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
