ಉದಯವಾಹಿನಿ, ಬಳ್ಳಾರಿ : ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜನಾರ್ಧನ ರೆಡ್ಡಿ ಪಕ್ಷಕ್ಕೆ ಬಂದರೆ ನಮ್ಮದೇನು ಅಭ್ಯಂತರವಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ಧನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆ ಬೇಡವೇ ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ.
ಒಂದು ವೇಳೆ ಅವರು ಬಂದರೆ ನನ್ನದೇನು ಅಭ್ಯಂತರವಿಲ್ಲ. ಹೃದಯದಿಂದ ಅವರನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು. ನಾನೇಕೆ ಅವರು ಪಕ್ಷಕ್ಕೆ ಬರುವುದನ್ನು ವಿರೋಧಿಸಲಿ, ಪಕ್ಷವನ್ನು ಕಟ್ಟಿ ಬೆಳೆಸಿದವರಲ್ಲಿ ಅವರು ಕೂಡ ಪ್ರಮುಖರು. ಬೇರೆ ಬೇರೆ ಕಾರಣಗಳಿಂದ ಪಕ್ಷ ಬಿಟ್ಟು ಹೋಗಿರಬಹುದು. ಬಿಜೆಪಿಗೆ ಬರಲು ಯಾರೊಬ್ಬರು ವಿರೋಧ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಶ್ರೀರಾಮುಲು ಅವರನ್ನು ರಾಜಕೀಯವಾಗಿ ಬೆಳೆಸಿದ್ದೇ ನಾನು ಎಂಬ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಕೇವಲ ರಾಜಕೀಯವಾಗಿ ಮಾತ್ರ ಬೆಳೆಸಲಿಲ್ಲ. ನನಗೆ ಅನ್ನ ಕೊಟ್ಟವರು ಅವರೇ ಎಂದು ಭಾವುಕರಾಗಿ ನುಡಿದರು.
ನನ್ನ ಮೇಲೆ ಜನಾರ್ಧನರೆಡ್ಡಿ ಅವರ ಋಣ ಸಾಕಷ್ಟಿದೆ. ರಾಜಕೀಯವಾಗಿ ನಾನು ಬೆಳೆಯಲು ಅವರೇ ಕಾರಣ. ಒಬ್ಬ ಸಾಮಾನ್ಯನಾಗಿದ್ದ ನನ್ನನ್ನು ಪಕ್ಷಕ್ಕೆ ಕರೆತಂದು ಎಲ್ಲವನ್ನು ಕೊಟ್ಟಿದ್ದಾರೆ. ಟೀಕೆ ಟಿಪ್ಪಣಿಗಳು ಏನೇ ಇದ್ದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಜನಾರ್ಧನ ರೆಡ್ಡಿ ಅವರ ಬಗ್ಗೆ ಎಂದೂ ಕೂಡ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

error: Content is protected !!