ಉದಯವಾಹಿನಿ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲಘುವಾಗಿ ಮಾತನಾಡಿರುವ ಬಿಜೆಪಿ ಸಂಸದ ಅನಂತ್‌ಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಾಲಿಗೆ ಕುಲವನ್ನು ಹೇಳುತ್ತದೆ ಎಂಬ ಮಾತಿನಂತೆ ನಿಮ್ಮ ಸಂಸ್ಕಾರ ಏನು ಎಂಬುದು ನೀವು ಆಡಿರುವ ಈ ಮಾತಿನಿಂದ ಪ್ರತಿಬಿಂಬಿತವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅನಂತ್‌ಕುಮಾರ್ ಹೆಗಡೆ ವಿರುದ್ಧ ಪೋಸ್ಟ್ ಹಾಕಿ ಕಿಡಿಕಾರಿರುವ ಸಚಿವ ರಾಮಲಿಂಗಾರೆಡ್ಡಿ ಅವರು, ಬಿಜೆಪಿ ಆರ್‌ಎಸ್‌ಎಸ್ ನಿಮ್ಮ ತಂದೆ -ತಾಯಿ ನಿಮಗೆ ಕಲಿಸಿರುವ ಸಂಸ್ಕೃತಿ ಇದೇನಾ? ಏನು ನಿಮ್ಮ ಆಚಾರ ವಿಚಾರ ಎಂದು ಹರಿಹಾಯ್ದಿದ್ದಾರೆ.
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ದಾಸರ ವಾಣಿಯನ್ನು ಪರಿಪಾಲಿಸಬೇಕಾದ ಸ್ಥಿತಿಗೆ ನೀವು ಬಂದು ನಿಂತಿರುವುದು ದುರಂತ. ಮಾತು ಆಡಿದರೆ ಹೋಯಿತು ಮುತ್ತು ಉದುರಿದರೆ ಹೋಯ್ತು ಎಂಬಂತೆ ನೀವು ಮುಖ್ಯಮಂತ್ರಿಗಳ ಬಗ್ಗೆ ಬಳಸಿರುವ ಪದ ಆರೂವರೆ ಕೋಟಿ ಕನ್ನಡದ ಜನತೆಯ ಕುರಿತು ಆಡಿದ ಮಾತಾಗಿರುತ್ತದೆ ಅವರಿಗೆ ಮಾಡಿದ ಅಪಮಾನವಾಗುತ್ತದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸಂಸದ ಹೆಗಡೆ ಅವರೇ ನೀವು ಆಡಿರುವ ಮಾತು ಬಳಸಿರುವ ಪದ ನಿಮ್ಮ ಮಾನಸಿಕ ಸ್ಥಿತಿಯ ಪ್ರತೀಕ. ಸಣ್ಣ ಮಾತು ಆಡುವುದರಿಂದ ನೀವು ದೊಡ್ಡವರಾಗುವುದಿಲ್ಲ ಹಿಂದೆ ಕೇಂದ್ರ ಸಚಿವರಾಗಿದ್ದಾಗ ಸಂವಿಧಾನ ಬದಲಿಸುತ್ತೇನೆ ಅದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿದ್ದೀರಿ ಈಗ ಇಂತಹ ಮಾತು ನಿಮಗೆ ಮರ್ಯಾದೆ ತರುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಕುಟುಕಿದ್ದಾರೆ.
ಬಿಜೆಪಿ ಪಕ್ಷಕ್ಕೆ ಕಿಂಚಿತ್ತಾದರು ಮಾನ ಮರ್ಯಾದೆ, ಆಚಾರ-ವಿಚಾರ ಇದ್ದರೆ ಅನಂತ್‌ಕುಮಾರ್ ಹೆಗಡೆ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿರುವ ರಾಮಲಿಂಗಾರೆಡ್ಡಿ ಅವರು, ಆಡಿದ ಮಾತಿಗೆ ನಾಡಿನ ಜನರ ಕ್ಷಮೆ ಕೇಳುವಂತೆಯೂ ಒತ್ತಾಯಿಸಿದ್ದಾರೆ.
