ಉದಯವಾಹಿನಿ, ಬೆಂಗಳೂರು: ರಸ್ತೆ ವಿಭಜಕ ದಾಟುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿ ಮೃತಪಟ್ಟಿರುವ ಘಟನೆ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಡುಗೋಡಿ ನಿವಾಸಿ ನರೇಂದ್ರ (47) ಮೃತ ವ್ಯಕ್ತಿ. ಬಿಬಿಎಂಪಿ ಕಸ ಸಂಗ್ರಹಿಸುವ ವಾಹನ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಇವರು, ಶುಕ್ರವಾರ ಕೆಲಸ ಮುಗಿಸಿ ಮಧ್ಯಾಹ್ನ 12.30ರ ಸುಮಾರಿಗೆ ಹೊಸೂರು ರಸ್ತೆಯ ಕಿದ್ವಾಯಿ ಆಸ್ಪತ್ರೆ ಬಳಿ ರಸ್ತೆ ವಿಭಜಕ ದಾಟುವಾಗ ಡೈರಿ ಸರ್ಕಲ್ ಕಡೆಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಲೆಗೆ ತೀವ್ರ ಪೆಟ್ಟಿ ಬಿದ್ದು ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಸಂಜೆ 5.30ರ ಸುಮಾರಿಗೆ ಮೃತಪಟ್ಟಿದ್ದಾರೆ.
ನರೇಂದ್ರ ಅವರು ಬಳ್ಳಾರಿ ಮೂಲದವರಾಗಿದ್ದು, ಆಡುಗೋಡಿಯಲ್ಲಿ ತಂಗಿ ಮನೆಯಲ್ಲಿ ನೆಲೆಸಿದ್ದರೆಂದು ತಿಳಿದುಬಂದಿದೆ. ಬಿಬಿಎಂಪಿ ಕಸ ಸಂಗ್ರಹಿಸುವ ವಾಹನದ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಘಟನೆ ಸಂಬಂಧ ಖಾಸಗಿ ಬಸ್ ಜಪ್ತಿ ಮಾಡಿದ್ದು, ಅದರ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.ನರೇಂದ್ರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
