ಉದಯವಾಹಿನಿ, ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹಗಲು-ರಾತ್ರಿ ದುಡಿದು ಪಕ್ಷ ಅಧಿಕಾರಕ್ಕೆ ತಂದ ಕಾರ್ಯ ಕರ್ತರಿಗೆ ಆಡಳಿತದಲ್ಲಿ ಸಹಭಾಗಿತ್ವ ಸಿಗದೆ ದಿನೇದಿನೇ ಅಸಹನೆ ಹೆಚ್ಚುತ್ತಿರುವುದು ಕಂಡುಬಂದಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದರೂ ರಾಜ್ಯದಲ್ಲಿ ನಿಗಮಮಂಡಳಿಗಳ ನೇಮಕಾತಿ ಸೇರಿದಂತೆ ವಿವಿಧ ರಾಜಕೀಯ ಸ್ಥಾನಮಾನಗಳು ಸಿಗದೆ ಕಾರ್ಯಕರ್ತರು ಸಿಡಿಮಿಡಿಗೊಳ್ಳುತ್ತಿದ್ದಾರೆ.
ಸುಮಾರು 80 ಕ್ಕೂ ಹೆಚ್ಚು ನಿಗಮ ಮಂಡಳಿಗಳು 3 ಸಾವಿರಕ್ಕೂ ಹೆಚ್ಚು ಸ್ಥಳೀಯ ಸಮಿತಿಗಳ ಹುದ್ದೆಗಳು, ಪ್ರಾಧಿಕಾರ, ಅಕಾಡೆಮಿ ಸೇರಿದಂತೆ ನಾನಾ ರೀತಿಯ ರಾಜಕೀಯ ಅವಕಾಶಗಳಿದ್ದರೂ ಈವರೆಗೂ ಯಾವುದಕ್ಕೂ ನೇಮಕಾತಿಗಳಾಗಿಲ್ಲ. ಪ್ರತಿ ಬಾರಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ದೆಹಲಿಗೆ ಭೇಟಿ ನೀಡುವಾಗ ನಿಗಮ ಮಂಡಳಿಗಳ ಕುರಿತು ಚರ್ಚೆ ನಡೆಸುವುದಾಗಿ ಕಾರ್ಯಕರ್ತರ ಮೂಗಿಗೆ ತುಪ್ಪ ಸವರಲಾಗುತ್ತದೆ.ಆದರೆ ಅಲ್ಲಿಗೆ ಹೋದ ಬಳಿಕ ಚರ್ಚೆಯಾಗುವುದೇ ಬೇರೆ ವಿಚಾರಗಳು.
ಹೀಗಾಗಿ ದಸರಾ, ದೀಪಾವಳಿ, ಹೊಸ ವರ್ಷ, ಸಂಕ್ರಾಂತಿ ಎಂದು ಒಂದೊಂದು ಹಬ್ಬದ ಸಂದರ್ಭದಲ್ಲೂ ಅವಕಾಶ ಸಿಗಬಹುದು ಎಂದು ಕಾದು ಕುಳಿತಿದ್ದವರಿಗೆ ನಿರಾಶೆಯ ಬುತ್ತಿ ಭಾರವಾಗಲಾರಂಭಿಸಿದೆ.ಹೀಗಾಗಿ ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳುತ್ತಿದ್ದಾರೆ. ಸಚಿವರುಗಳು ಕೂಡ ಪ್ರತಿದಿನ ಕಾರ್ಯಕರ್ತರು, ಮುಖಂಡರುಗಳ ಅರ್ಜಿಗಳನ್ನು ಪಡೆದು ಭರವಸೆ ನೀಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಒಂದಿಷ್ಟು ವರ್ಗಾವಣೆ ಹೊರತುಪಡಿಸಿ ಉಳಿದ ಯಾವ ಕೆಲಸಗಳೂ ಆಗುತ್ತಿಲ್ಲ ಎಂಬ ಅಸಹನೆಯನ್ನು ಹೊರಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!