ಉದಯವಾಹಿನಿ, ಕಲಬುರಗಿ: ವಿದ್ಯಾರ್ಥಿಗಳಿಂದ ಮನೆಗೆಲಸ ಹಾಗೂ ಶಾಲೆಯಲ್ಲಿನ ಶೌಚಾಲಯ ಸ್ವಚ್ಛತಾ ಕಾರ್ಯಗಳಿಗೆ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಮಾಲಗತ್ತಿ ರಸ್ತೆಯಲ್ಲಿರುವ ಮೌಲಾನಾ ಆಜಾಧ್ ಇಂಗ್ಲೀಷ್ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಶ್ರೀಮತಿ ಜೋರಾ ಜಬೀನ್ ಅವರ ವಿರುದ್ಧ ಪೋಲಿಸ್ ಠಾಣೆಯಲ್ಲಿ ಪಾಲಕರು ದೂರು ಸಲ್ಲಿಸಿದ್ದಾರೆ.
ನನ್ನ ಪುತ್ರ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಆತನಿಗೆ ಶಾಲೆಯಲ್ಲಿನ ಶೌಚಾಲಯ ಸ್ವಚ್ಚತೆ ಹಾಗೂ ಕಸಗೂಡಿಸಲು ಪ್ರಿನ್ಸಿಪಾಲರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೇವಲ ನನ್ನ ಪುತ್ರ ಅಷ್ಟೇ ಅಲ್ಲದೇ ಇನ್ನುಳಿದ ವಿದ್ಯಾರ್ಥಿಗಳಿಗೂ ಸಹ ಅಂತಹ ನಿಯಮ ಬಾಹಿರ ಕೆಲಸಗಳಲ್ಲಿ ತೊಡಗಿಸುತ್ತಿದ್ದಾರೆ ಎಂದು ದೂರಿದರು.
ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಶೌಚಾಲಯ ಇದ್ದರೂ ಸಹ ಅದು ಬಳಕೆಯಾಗುತ್ತಿಲ್ಲ. ಬಹುತೇಕ ಎಲ್ಲ ವಿದ್ಯಾರ್ಥಿಗಳು ಶಾಲೆಯ ಹೊರಗಡೆಯೇ ಮೂತ್ರ ವಿಸರ್ಜನೆ ಮಾಡಿ ಬರುತ್ತಾರೆ. ಆದಾಗ್ಯೂ, ಪ್ರಿನ್ಸಿಪಾಲರ ಶೌಚಾಲಯ ಇದ್ದು, ಅದನ್ನು ಸಹ ವಿದ್ಯಾರ್ಥಿಗಳಿಂದಲೇ ಸ್ವಚ್ಛಗೊಳಿಸುತ್ತಾರೆ. ಆ ಕುರಿತು ಕೇಳಿದರೆ ನಮ್ಮಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಅದಕ್ಕಾಗಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಪ್ರಿನ್ಸಿಪಾಲರು ಹೇಳುತ್ತಾರೆ ಎಂಧು ವಿದ್ಯಾರ್ಥಿಯ ಪೋಷಕ ಉಮರ್ ಕಾಲೋನಿಯ ನಿವಾಸಿ ಮೊಹ್ಮದ್ ಜಮೀರ್ ತಂದೆ ಗುಲಾಮ್ ಮಹಿನುದ್ದೀನ್ ಅವರು ಆರೋಪಿಸಿದರು.
ಕೇವಲ ಶಾಲೆಯಲ್ಲಿ ಅಷ್ಟೇ ಅಲ್ಲ, ಶಾಲೆಯಿಂದ ಪ್ರಿನ್ಸಿಪಾಲರ ಮನೆ ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ಯಾದುಲ್ಲಾ ಕಾಲೋನಿಯಲ್ಲಿದ್ದು, ಆ ಮನೆಯಲ್ಲಿನ ಉದ್ಯಾನವನದ ಸ್ವಚ್ಛತಾ ಕಾರ್ಯಕ್ರಮಕ್ಕೆ ಹಾಗೂ ನೀರು ಹಣಿಸುವುದಕ್ಕೂ ಸಹ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ. ಈ ಕುರಿತು ವಿದ್ಯಾರ್ಥಿಗಳು ಆಕ್ಷೇಪಿಸಿದರೆ ಪ್ರಿನ್ಸಿಪಾಲ್ ಅವರ ಪತಿಯು ವಿದ್ಯಾರ್ಥಿಗಳಿಗೆ ಹೆದರಿಸುತ್ತಾರೆ. ಈ ಕುರಿತು ನಾವು ಮಕ್ಕಳ ಸಹಾಯವಾಣಿಗೆ ದೂರು ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿಗಳಿಗೂ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ ಸಹ ದೂರು ಸಲ್ಲಿಸುತ್ತೇವೆ ಎಂದು ಅವರು ಹೇಳಿದರು. ಕೂಡಲೇ ವಿದ್ಯಾರ್ಥಿಗಳನ್ನು ಶಾಲೆಯ ಶೌಚಾಲಯ ಹಾಗೂ ಮನೆಯ ಉದ್ಯಾನವನ ಕೆಲಸಗಳಿಗೆ ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಅಲ್ಲದೇ ತಪ್ಪಿತಸ್ಥ ಪ್ರಿನ್ಸಿಪಾಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
