ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ತಿಂಗಳು ಫೆಬ್ರವರಿ 16 ರಂದು ಬಜೆಟ್ ಮಂಡಿಸಲಿದ್ದು, ಅದಕ್ಕೆ ಪೂರ್ವಭಾವಿ ಸಮಾಲೋಚನಾ ಸಭೆಗಳನ್ನು ಆರಂಭಿಸಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ಬಜೆಟ್‍ಗಳನ್ನು ಮಂಡಿಸಿ ದಾಖಲೆ ನಿರ್ಮಿಸಿರುವ ಸಿದ್ದರಾಮಯ್ಯ, ತಮ್ಮ 15ನೇ ಬಜೆಟ್‍ಗೆ ಪೂರ್ವ ತಯಾರಿ ಆರಂಭಿಸಿದ್ದಾರೆ.ಲೋಕಸಭೆ ಚುನಾವಣೆಯ ವರ್ಷವಾಗಿರುವುದರಿಂದ ಈ ಬಾರಿಯ ಬಜೆಟ್ ವ್ಯಾಪಕ ಗಮನ ಸೆಳೆದಿದೆ. ಜೊತೆಗೆ ಪಂಚಖಾತ್ರಿ ಯೋಜನೆಗಳ ಆರ್ಥಿಕ ಹೊರೆ ಹಣಕಾಸಿನ ಲೆಕ್ಕಾಚಾರಕ್ಕೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪೂರ್ವತಯಾರಿಗಳು ಆರಂಭವಾಗಿವೆ.
ಇಂದಿನಿಂದ ಸತತವಾಗಿ ಬಜೆಟ್ ಪೂರ್ವ ಭಾವಿ ಸಭೆಗಳನ್ನು ಮುಖ್ಯಮಂತ್ರಿ ನಡೆಸಲಿದ್ದಾರೆ. ಮೊದಲ ದಿನವಾದ ಇಂದು ಆರೋಗ್ಯ, ಕುಟುಂಬ ಕಲ್ಯಾಣ, ತೋಟಗಾರಿಕೆ, ಗಣಿ ಭೂವಿಜ್ಞಾನ, ರೇಷ್ಮೆ ಪಶುಸಂಗೋಪನೆ, ಯೋಜನೆ, ಉನ್ನತ ಶಿಕ್ಷಣ, ಬೆಂಗಳೂರು ಅಭಿವೃದ್ಧಿ, ಜಲಸಂಪನ್ಮೂಲ, ಸಣ್ಣ ನೀರಾವರಿ, ವಿಜ್ಞಾನ-ತಂತ್ರಜ್ಞಾನ, ಪರಿಸರ ಜೀವಿಶಾಸ್ತ್ರ, ಆಹಾರ ನಾಗರಿಕ ಸರಬರಾಜು, ಸಹಕಾರ ಸೇರಿದಂತೆ 14ಕ್ಕೂ ಹೆಚ್ಚು ಇಲಾಖೆಗಳ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಮಾಲೋಚನೆ ನಡೆಸಿದ್ದಾರೆ.
